ಮುಲಾಯಂ ಸಿಂಗ್ ಯಾದವ್ ಸೊಸೆ, ಅಖಿಲೇಶ್ ಸಿಂಗ್ ಯಾದವ್ ತಮ್ಮನ ಪತ್ನಿ ಅಪರ್ಣಾ ಯಾದವ್, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದರಿಂದ ಸಮಾಜವಾದಿ ಪಾರ್ಟಿಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶದಲ್ಲಿ ಈಗ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಅಖಿಲೇಶ್ ಯಾದವ್, ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಇಂಥ ಸಂದರ್ಭದಲ್ಲಿ, ಯಾದವ್ ಸೊಸೆ ಬಿಜೆಪಿ ಸೇರಿದ್ದು, ಸಮಾಜವಾದಿ ಪಾರ್ಟಿಗೆ ಭಾರೀ ಮುಖಭಂಗವಾಗಿದೆ.
ಅಖಿಲೇಶ್ ಯಾದವ್ ತಮ್ಮನಾದ ಪ್ರತೀಕ್ ಯಾದವ್ ಪತ್ನಿಯಾಗಿರುವ ಅಪರ್ಣಾ, ತಾನು ಪ್ರಧಾನಿ ನರೇಂದ್ರ ಮೋದಿಯಿಂದ ಪ್ರೇರಣೆಗೊಂಡು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದ್ದಾರೆ. ಮೋದಿಜಿ ಮಾಡಿದ ಕಾರ್ಯಗಳನ್ನು ನಾನು ಮೆಚ್ಚಿದ್ದೇನೆ. ಈಗ ಬಿಜೆಪಿ ಸೇರ್ಪಡೆಗೊಂಡು, ಅವರು ವಹಿಸಿರುವ ಕೆಲ ಕೆಲಸಗಳನ್ನು ನಾನೂ ಕೂಡ ಮಾಡಿ, ಈ ದೇಶದ ಸೇವೆ ಮಾಡಬೇಕೆಂದಿದ್ದೇನೆಂದು ಅಪರ್ಣಾ ಹೇಳಿದ್ದಾರೆ.
ಉತ್ತರಪ್ರದೇಶದ ಉಪ ಮುಖ್ಯಮಂತ್ರಿಯಾಗಿರುವ ಕೇಶವ್ ಮೌರ್ಯ ಕಾರ್ಯಕ್ರಮ ನಡೆಸಿ, ಅಲ್ಲಿ, ಅಪರ್ಣಾ ಅವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಈ ವೇಳೆ ಸಮಾಜವಾದಿ ಪಾರ್ಟಿಯ ಮುಲಾಯಂ ಸಿಂಗ್ ಅವರ ಸೊಸೆ, ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳುವ ಮೂಲಕ, ಅಖಿಲೇಶ್ ಯಾದವ್ ವಿರುದ್ಧ ಚಾಟೀ ಬೀಸಿದ್ದಾರೆ.
ಅಪರ್ಣಾ ಯಾದವ್ (32) ಉತ್ತರಪ್ರದೇಶದಲ್ಲಿ ಬಾವರೆ ಎಂಬ ಸಂಸ್ಥೆ ನಡೆಸುತ್ತಿದ್ದು, ಇದರಲ್ಲಿ ಬಡ ಮಹಿಳೆಯರಿಗೆ ಕೆಲಸ ನೀಡಿದ್ದಾರೆ. ಈ ಸಂಸ್ಥೆ ಮಹಿಳೆಯರ ಉನ್ನತಿಗಾಗಿ ಎಂದಿದ್ದಾರೆ. ಇನ್ನು ಲಖನೌನಲ್ಲಿ ಗೋ ರಕ್ಷಣೆಗಾಗಿ, ಆಶ್ರಯ ತಾಣವನ್ನ ನಿರ್ಮಿಸಿದ್ದಾರೆ. ಸುಮಾರು ವರ್ಷಗಳಿಂದಲೇ ಬಿಜೆಪಿಗೆ ಸೇರ್ಪಡೆಗೊಳ್ಳಬೇಕು ಎಂದು ಬಯಸಿದ್ದ ಅಪರ್ಣಾ ಇಂದು ಬಿಜೆಪಿಗೆ ಸೇರಿದ್ದಾರೆ.