ಬೆಂಗಳೂರಲ್ಲಿ ಪೊಲೀಸರ ಹದ್ದಿನ ಕಣ್ಣು..!

www.karnatakatv.net: ಇನ್ನೊಂದು ದಿನ ಕಳೆದರೆ ನಾಡಿನಲ್ಲಿ ಕನ್ನಡ ರಾಜ್ಯೋತ್ಸವ ಕಳೆಕಟ್ಟಬೇಕಿತ್ತು. ಆದ್ರೆ ಅದರ ಮುನ್ನವೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದಿಂದಾಗಿ ಇಡೀ ಕರುನಾಡಿನಲ್ಲಿ ಸೂತಕದ ಛಾಯೆ ಆವರಿಸಿದೆ. ರಾಜ್ಯದ ನಾನಾ ಮೂಲೆಗಳಿಂದ ಅಗಲಿದ ನಟನನ್ನು ಕಾಣಲು ಅಭಿಮಾನಿಗಳು ಸಾಗರೋಪಾದಿಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದತ್ತ ಧಾವಿಸುತ್ತಿದ್ದಾರೆ. ನೆಚ್ಚಿನ ನಟ ಸಾವಿನಿಂದ ತೀವ್ರ ಬೇಸರಗೊಂಡಿರುವ ಅಭಿಮಾನಿಗಳು ಕಣ್ಣೀರಿಡುತ್ತಾ ಗೋಳಾಡುತ್ತಿದ್ದಾರೆ. ಮತ್ತೊಂದೆಡೆ ಲಕ್ಷಾಂತರ ಸಂಖ್ಯೆಯಲ್ಲಿ ಪಾರ್ಥಿವ ಶರೀರದ ದರ್ಶನ ಪಡೆಯಲು ಬರುತ್ತಿರೋ ಅಭಿಮಾನಿಗಳನ್ನು ನಿಯಂತ್ರಿಸೋದು ಪೊಲೀಸರಿಗೆ ದೊಡ್ಡ ಸಾಹಸವಾಗಿದೆ.

ಹೀಗಾಗಿ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ಗೃಹ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ನಗರದಲ್ಲಿ ಸುಮಾರು 20 ಸಾವಿರ ಪೊಲೀಸರನ್ನ ನಿಯೋಜಿಸಲಾಗಿದೆ. ಅಲ್ಲದೆ ರಾಜ್ಯದ ಇತರೆ ಜಿಲ್ಲೆಗಳಿಂದಲೂ ಸುಮಾರು ಒಂದೂವರೆ ಸಾವಿರ ಪೊಲೀಸ್ ಅಧಿಕಾರಿಗಳನ್ನು ನಗರದಲ್ಲಿ ಭದ್ರತೆಗೆ ಧಕ್ಕೆಯುಂಟಾಗದoತೆ ನಿಯೋಜನೆ ಮಾಡಲಾಗಿದೆ. 20 ಪ್ಲಟೂನ್ ಕೆಎಸ್ ಆರ್ ತುಕಡಿ ಅಲ್ಲದೆ ಕೇಂದ್ರ ಮೀಸಲು ಪಡೆಯನ್ನೂ ಕೂಡ ನಗರದಲ್ಲಿ ನಿಯೋಜಿಸಲಾಗಿದೆ.

ಇನ್ನು ಅಗಲಿದ ನಟ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ನೆರವೇರುವವರೆಗೂ ಅಭಿಮಾನಿಗಳು ಶಾಂತ ರೀತಿಯಿಂದ ವರ್ತಿಸಬೇಕು. ತಾಳ್ಮೆ ಕಳೆದುಕೊಳ್ಳದೆ ಸರ್ಕಾರದೊಂದಿಗೆ ಸಹಕರಿಸಬೇಕು ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿಕೊಂಡಿದ್ದಾರೆ. ಇಂದು ಸಂಜೆ 6 ಗಂಟೆ ಬಳಿಕ ನಗರದ ಕಂಠೀರವ ಕ್ರೀಂಡಾಗಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಪ್ಪು ಅಂತ್ಯಕ್ರಿಯೆ ನೆರವೇರಲಿದೆ.

About The Author