ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ನಡೆದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿ 24 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕ್ರಮವನ್ನು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ತೀವ್ರವಾಗಿ ಖಂಡಿಸಿ, ಬಂಧಿತರು ನಿಜವಾಗಿಯೂ ಕಲ್ಲು ತೂರಿದವರೇ? ಅಮಾಯಕರನ್ನು ಪೊಲೀಸರ ಒತ್ತಡದಡಿ ಬಂಧಿಸಿರುವರೇ? ಎಂದು ಪ್ರಶ್ನಿಸಿದರು.
ಮೆರವಣಿಗೆಯ ಸಂದರ್ಭದಲ್ಲಿ ಒಬ್ಬ ಮಹಿಳೆ ಮುಸ್ಲಿಮರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಷಯವನ್ನು ಉಲ್ಲೇಖಿಸಿದ ಲಕ್ಷ್ಮಣ್, ಅದೇ ಮಹಿಳೆ ಹಿಂದೂಗಳ ವಿರುದ್ಧ ಮಾತನಾಡಿದ್ದರೆ ಸುಮ್ಮನಿರುತ್ತಿರಲಿಲ್ಲ. ಈಗ ಆಕೆಗೆ ಮುಂದೆ ಬಿಜೆಪಿಯಿಂದ ಮದ್ದೂರು ಟಿಕೆಟ್ ನೀಡುವ ಯೋಜನೆ ಇದೆ ಎಂದು ವ್ಯಂಗ್ಯವಾಡಿದರು.
ಅದೇ ಸಂದರ್ಭದಲ್ಲಿ, ಮೈಸೂರಿನಲ್ಲಿ ನಡೆದ ಚಾಮುಂಡಿಬೆಟ್ಟ ಚಲೋ ಕಾರ್ಯಕ್ರಮದ ಮೇಲೂ ಅವರು ಆಕ್ರೋಶ ವ್ಯಕ್ತಪಡಿಸಿದರು. ಹಿಂದೂ ಜಾಗರಣಾ ವೇದಿಕೆಯ ಹೆಸರಿನಲ್ಲಿ 5 ಸಾವಿರ ಗೂಂಡಾಗಳನ್ನು ಹೊರಗಿನಿಂದ ತರಲಾಗಿತ್ತು. ಮೈಸೂರಿನಲ್ಲೂ ಗಲಭೆ ಸೃಷ್ಟಿಸಿ ಬಸ್‌ಗಳಿಗೆ ಬೆಂಕಿ ಹಚ್ಚುವ ಯತ್ನ ನಡೆಯಿತು. ಇದು ಬಿಜೆಪಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿರ್ದೇಶನದಲ್ಲಿ ನಡೆದ ಕೋಮು ಗಲಭೆ ಸೃಷ್ಟಿಯ ಭಾಗ ಎಂದು ಆರೋಪಿಸಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧವೂ ಲಕ್ಷ್ಮಣ್ ತೀವ್ರ ಟೀಕೆ ನಡೆಸಿ, ಅವರಿಗೆ ಗೌರವ, ಘನತೆ ಇಲ್ಲ. ಅವರು ಜನರನ್ನು ಬೆದರಿಸುತ್ತಿದ್ದು, ಗೂಂಡಾಗಳ ಜೊತೆಗೂಡಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಇಂತಹ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಶಿಕ್ಷಿಸಬೇಕು. ಇಲ್ಲದಿದ್ದರೆ ಮೈಸೂರು ಜನತೆ ಅವರನ್ನು ತಿರಸ್ಕರಿಸುತ್ತಾರೆ ಎಂದು ಎಚ್ಚರಿಸಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ