ಮಾರಕಾಸ್ತ್ರಗಳನ್ನು ಇಟ್ಟುಕೊಂಡೇ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ಕು ಜನರನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಧಾರವಾಡದ ಜಿಶಾನ್ ಸಮೀರ್ ಅಹ್ಮದ್ ಅನವಾಲೆ, ರಾಯಾಪುರದ ಮಲೀಕ್‌ರೆಹಾನ್ ಗಫಾರ್‌ಸಾಬ್, ಸತ್ತೂರಿನ ಮುಬಾರಕ್ ಮಹ್ಮದಜಾಫರ್ ಬಾಗೇವಾಡಿ ಹಾಗೂ ಸೈದಾಪುರದ ಮಹ್ಮದ್‌ಅಶ್ಲೀಲ್ ಅಬ್ದುಲ್ ಜಬ್ಬಾರ್ ಬಾರುದವಾಲೆ ಎಂಬಾತರೇ ಬಂಧಿತ ಆರೋಪಿಗಳಾಗಿದ್ದರೆ.
ಈ 4 ಜನರನ್ನು ಉದಯಗಿರಿ ಡಬಲ್ ರೋಡ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆಯೇ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ 62 ಸಾವಿರ ರೂಪಾಯಿ ಮೌಲ್ಯದ 1 ಕೆಜಿ ಗಾಂಜಾ, 60 ಸಾವಿರ ರೂಪಾಯಿ ಮೌಲ್ಯದ ಒಂದು ಬೈಕ್, 500 ರೂಪಾಯಿ ನಗದು, 9 ಸಾವಿರ ರೂಪಾಯಿ ಮೌಲ್ಯದ 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಬೈಕ್‌ನ್ನು ಪೊಲೀಸರು ಪರಿಶೀಲಿಸಿದಾಗ ಅದರ ಸೀಟ್ ಕೆಳಗೆ ಸಣ್ಣ ಗಾತ್ರದ ಎರಡು ಮಚ್ಚು ಹಾಗೂ ಒಂದು ತಲ್ವಾರ್ ಕೂಡ ಪತ್ತೆಯಾಗಿದೆ. ಗಾಂಜಾ ಮಾರಾಟ ಮಾಡುವ ವೇಳೆ ಯಾರಾದರೂ ದಾಳಿ ನಡೆಸಿದರೆ ಅವರ ಮೇಲೆ ಬೀಸಲು ಈ ಮಾರಕಾಸ್ತ್ರಗಳನ್ನು ಇವರು ಇಟ್ಟುಕೊಂಡಿದ್ದರು ಎಂಬ ಅಂಶವನ್ನೂ ಪೊಲೀಸರು ಬಯಲಿಗೆಳೆದಿದ್ದಾರೆ. ಒಡಿಶಾ ರಾಜ್ಯದಿಂದ ಗಾಂಜಾ ತಂದು ಅದನ್ನು ಇವರು ಧಾರವಾಡದಲ್ಲಿ ಮಾರಾಟ ಮಾಡುತ್ತಿದ್ದರು. ಸದ್ಯ ನಾಲ್ಕೂ ಜನ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ.




