ಬೆಂಗಳೂರು: ಸಂತ ಕನಕದಾಸರ ಜನ್ಮಸ್ಥಳ ಬಾಡದಲ್ಲಿ ನಿರ್ಮಿಸಲಾಗಿರುವ ಕನಕದಾಸರ ಅರಮನೆಯಲ್ಲಿ ಧ್ವನಿ-ಬೆಳಕು ಪ್ರದರ್ಶನ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು.
ಅವರು ಇಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನಕದಾಸರ ಅರಮನೆಯು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಇದನ್ನು ಇನ್ನಷ್ಟು ಉತ್ತಮ ಪಡಿಸುವ ನಿಟ್ಟಿನಲ್ಲಿ ಧ್ವನಿ-ಬೆಳಕು ಪ್ರದರ್ಶನ ಪ್ರಾರಂಭಿಸಲು ಸೂಚಿಸಿದರು. ಇದಕ್ಕೆ ಅತ್ಯುತ್ತಮ ಸಂಸ್ಥೆಗಳ ಮೂಲಕ, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.
ಅಂತೆಯೇ ಅರಮನೆಯಲ್ಲಿ ಕನಕದಾಸರ ಜೀವನ ಕುರಿತು ಅನಿಮೇಷನ್ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಈ ತಂತ್ರಜ್ಞಾನವನ್ನು ಉನ್ನತೀಕರಿಸಿ, 3ಡಿ ಚಿತ್ರ ನಿರ್ಮಾಣ ಮಾಡಲು ಮುಖ್ಯಮಂತ್ರಿಗಳು ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಡಳಿತ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸಚಿವರಾದ ಶಿವರಾಮ ಹೆಬ್ಬಾರ, ಬಿ.ಸಿ. ಪಾಟೀಲ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.