ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಾಪ್ತನನ್ನೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅಮೆರಿಕದ ಉಟಾವಾ ವ್ಯಾಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭೀಕರ ಹತ್ಯೆಯಾಗಿದೆ.
ಉಟಾವಾ ವ್ಯಾಲಿಯ ಕ್ಯಾಂಪಸ್‌ನಲ್ಲಿ “ದಿ ಅಮೆರಿಕನ್ ಕಮ್ ಬ್ಯಾಕ್” ಮತ್ತು “ಪ್ರೂವ್ ಮಿ ರಾಂಗ್” ಘೋಷವಾಕ್ಯಗಳೊಂದಿಗೆ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಚಾರ್ಲಿ ಕಿರ್ಕ್ ಭಾಷಣ ಮಾಡುತ್ತಿದ್ದರು. ಈ ವೇಳೆ ಆಗಂತುಕನೋರ್ವ ಗುಂಡಿನ ದಾಳಿ ನಡೆಸಿದ್ದು, 31 ವರ್ಷದ ಚಾರ್ಲಿ ಕಿರ್ಕ್ ಸ್ಥಳದಲ್ಲೇ ಅಸುನೀಗಿದ್ದಾರೆ.
ಚಾರ್ಲಿ ಕಿರ್ಕ್ ಹತ್ಯೆಯನ್ನು ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ. ಚಾರ್ಲಿ ಕಿರ್ಕ್ ಯಾವ ಅಮೆರಿಕನ್ ಮೌಲ್ಯಗಳಿಗಾಗಿ ತಮ್ಮ ಬದುಕನ್ನು ಮುಡುಪಿಟ್ಟಿದ್ದರೋ, ಮತ್ತು ಯಾವ ಅಮೆರಿಕನ್ ಮೌಲ್ಯಗಳಿಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೋ, ಆ ಮೌಲ್ಯಗಳಿಗೆ ನಾವು ಬದ್ಧರಾಗಬೇಕು. ಎಲ್ಲಾ ಅಮೆರಿಕನ್ನರಲ್ಲಿ ಮನವಿ ಮಾಡುತ್ತೇನೆ ಅಂತಾ, ಡೊನಾಲ್ಡ್ ಟ್ರಂಪ್ ಭಾವನಾತ್ಮಕ ಸಂದೇಶ ನೀಡಿದ್ದಾರೆ.
ಚಾರ್ಲಿ ಕಿರ್ಕ್ ಅವರು ವಾಕ್ ಸ್ವಾತಂತ್ರ್ಯ, ಪೌರತ್ವ, ಕಾನೂನಿನ ನಿಯಮ ಮತ್ತು ದೇಶಭಕ್ತಿ, ದೇವರ ಮೇಲಿನ ಪ್ರೀತಿಯ ಅಮೆರಿಕನ್ ಮೌಲ್ಯಗಳಿಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಈ ದುಃಖದ ಸಮಯದಲ್ಲಿ, ನಾನು ಅವರ ಕುಟುಂಬದೊಂದಿಗೆ ನಿಂತಿದ್ದೇನೆ. ಪ್ರತಿಯೊಬ್ಬ ಅಮೆರಿಕನ್ ಕೂಡ ಚಾರ್ಲಿ ಕಿರ್ಕ್ ಅವರ ಕುಟುಂಬಕ್ಕೆ ನೈತಿಕ ಬೆಂಬಲ ನೀಡಬೇಕೆಂದು, ಟ್ರಂಪ್ ಕರೆ ನೀಡಿದ್ದಾರೆ.
ಇನ್ನು, ಚಾರ್ಲಿ ಕಿರ್ಕ್ ಸ್ಮರಣಾರ್ಥ ಅಮೆರಿಕಾದಾದ್ಯಂತ ಬಾವುಟಗಳನ್ನು, ಸೆಪ್ಟೆಂಬರ್ 14ರ ಭಾನುವಾರದವರೆಗೆ ಅರ್ಧ ಮಟ್ಟದಲ್ಲಿ ಹಾರಿಸುವಂತೆ, ಟ್ರಂಪ್ ಆದೇಶಿಸಿದ್ದಾರೆ. ಹೀಗಾಗಿ ವೈಟ್ ಹೌಸ್ ಎದುರಿನ ಬಾವುಟವನ್ನೂ ಅರ್ಧ ಮಟ್ಟದಲ್ಲೇ ಹಾರಿಸಲಾಗಿದೆ.