ಅಕ್ರಮ ಆಸ್ತಿಗಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ವಸತಿ ಸಚಿವ ಜಮೀರ್ ಅಹಮದ್ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ. ವಿಚಾರಣಾ ನೋಟಿಸ್ ಜಾರಿ ಹಿನ್ನಲೆಯಲ್ಲಿ, ಜಮೀರ್ ದಾಖಲೆಗಳೊಂದಿಗೆ ತನಿಖಾಧಿಕಾರಿಗಳ ಎದುರು ಹಾಜರಾಗಿ ಸ್ಪಷ್ಟನೆ ನೀಡಿದರು. ಸತತ ಎರಡು ಗಂಟೆಗಳ ಕಾಲ ವಿಚಾರಣೆ ನಡೆದಿದ್ದು, ಅವರ ಆಸ್ತಿ ಮತ್ತು ಹಣಕಾಸು ವ್ಯವಹಾರಗಳ ಬಗ್ಗೆ ಪೂರಕ ಮಾಹಿತಿ ಪಡೆದುಕೊಳ್ಳಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ಹಲವು ಪ್ರಶ್ನೆಗಳ ಮೂಲಕ ಜಮೀರ್ ಖಾನ್ ಅವರನ್ನು ವಿಚಾರಿಸಿದ್ದು, ತಮಗೆ ಅಗತ್ಯವಿದ್ದಾಗ ಪುನಃ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಜಮೀರ್ ಜೊತೆ ವ್ಯವಹಾರ ಹೊಂದಿದ್ದ ಕೆಲವರ ಕಚೇರಿಗಳಲ್ಲೂ ಪರಿಶೀಲನೆ ನಡೆದಿರುವ ಮಾಹಿತಿ ಇದೆ. ಜಮೀರ್ ಆಪ್ತರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಪ್ರಕರಣದ ಭಾಗವಾಗಿ, ಜಮೀರ್ ಖಾನ್ ಜತೆ ಹಣಕಾಸು ವ್ಯವಹಾರ ನಡೆಸಿದ ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ಉದ್ಯಮಿ ಕೆಜಿಎಫ್ ಬಾಬು ಅವರನ್ನು ಕೂಡ ಇತ್ತೀಚೆಗೆ ವಿಚಾರಣೆ ಮಾಡಲಾಗಿದೆ. ಇದಲ್ಲದೆ, ಸಚಿವ ದಿನೇಶ್ ಗುಂಡೂರಾವ್ಗೂ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂಬ ವರದಿಯೂ ಇದೆ.
ಈ ಹಿಂದೆ ಐಎಂಎ ಪೊಂಜಿ ಹಗರಣದ ತನಿಖೆ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಆಗಸ್ಟ್ 2021ರಲ್ಲಿ ಜಮೀರ್ ಖಾನ್ ಅವರ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಕಂಡುಬಂದ ಅಕ್ರಮ ಆಸ್ತಿ ಸಂಬಂಧಿತ ಅಂಶಗಳನ್ನು ಇಡಿ ನಂತರ ಎಸಿಬಿ ಜೊತೆ ಹಂಚಿಕೊಂಡಿತು. ಎಸಿಬಿ ನಿಷ್ಕ್ರಿಯಗೊಂಡ ನಂತರ, ಈ ಪ್ರಕರಣವನ್ನು ಮುಂದಿನ ತನಿಖೆಗಾಗಿ ಲೋಕಾಯುಕ್ತಕ್ಕೆ ವರ್ಗಾಯಿಸಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ