ವಿಜಯಪುರ : ರಾಜ್ಯದಲ್ಲಿ ಸಿಎಂ ಬದಲಾವಣೆಯ ವಿಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ನಾನೇ ಐದು ವರ್ಷ ಅಧಿಕಾರ ನಡೆಸುತ್ತೇನೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆಯ ಚರ್ಚೆಗೆ ಬ್ರೇಕ್ ಬಿದ್ದಂತಾಗಿದೆ. ಆದರೆ ಸ್ವಾಮೀಜಿಗಳು ಮಾತ್ರ ತಮ್ಮ ನೆಚ್ಚಿನ ರಾಜಕೀಯ ನಾಯಕರಿಗೆ ಸಿಎಂ ಆಗಲಿ ಎಂದು ಹರಸುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ರಂಭಾಪುರಿ ಶ್ರೀಗಳು, ಮಾತಿನ ಪ್ರಕಾರ ಮುಂದಿನ ಸಿಎಂ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟು ಕೊಡಬೇಕು ಎಂದು ಹೇಳಿದ್ದರು. ಬಹಿರಂಗವಾಗಿಯೇ ಈ ರೀತಿಯಾಗಿ ಡಿಕೆಶಿ ಪರ ಬ್ಯಾಟ್ ಬೀಸಿದ್ದ ಸ್ವಾಮೀಜಿಗಳ ಮಾತು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಆದರೆ ಇದೀಗ ಮತ್ತೊಬ್ಬ ಸ್ವಾಮೀಜಿ ಕೈ ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದು ಹೇಳಿದ್ದಾರೆ.
ವಿಜಯಪುರದ ತೊರವಿಯಲ್ಲಿಂದು ಗಚ್ಚಿನಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಥಣಿಯ ಶಿವಬಸವ ಸ್ವಾಮೀಜಿ ಬಹಿರಂಗವಾಗಿಯೇ ಲೋಕೋಪಯೋಗಿ ಸಚಿವ ಸತೀಶ್ ಪರ ಬ್ಯಾಟ್ ಬೀಸಿದ್ದಾರೆ. ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗಬೇಕು, ಬಳಿಕ ಸಿದ್ಧಲಿಂಗೇಶ್ವರ ಮಠಕ್ಕೆ ಭೇಟಿ ನೀಡಬೇಕು ಎಂದು ಹೇಳಿದ್ದಾರೆ.
ಅಲ್ಲದೆ ಸ್ಥಳದಲ್ಲಿದ್ದ ಇನ್ನೋರ್ವ ಶ್ರೀ, ಸಿದ್ಧಲಿಂಗೇಶ್ವರ ಸ್ವಾಮೀಜಿ, ಮುಂದೆ ಸತೀಶ್ ಜಾರಕಿಹೊಳಿ ಸಿಎಂ ಆಗಿ ನಮ್ಮ ಮಠಕ್ಕೆ ಬರಲಿ, ಮುಖ್ಯಮಂತ್ರಿಯಾದ ಮೇಲೆ ಅವರಿಂದಲೇ ನಮ್ಮ ಮಠದ ಉದ್ಘಾಟನೆಯಾಗಬೇಕು ಎಂದು ಹೇಳುವ ಮೂಲಕ ಸ್ವಾಮೀಜಿಗಳಿಬ್ಬರು ಹೊಸ ಸಂಚಲನ ಸೃಷ್ಟಿಸಿದ್ದಾರೆ. ಇನ್ನೂ ಪ್ರಮುಖವಾಗಿ ಸಿಎಂ ಬದಲಾವಣೆಯ ಸನ್ನಿವೇಶ ನಿರ್ಮಾಣವಾದರೆ, ಸಿದ್ದರಾಮಯ್ಯ ಬಳಿಕ ಡಿಕೆ ಶಿವಕುಮಾರ್ ಎನ್ನುವ ಪರಿಸ್ಥಿತಿಯ ನಡುವೆಯೇ ಸತೀಶ್ ಜಾರಕಿಹೊಳಿ ಹೆಸರು ರೇಸ್ನಲ್ಲಿ ಕೇಳಿ ಬರುತ್ತಿದೆ. ಅಂತಿಮವಾಗಿ ಈ ವಿಚಾರಕ್ಕೆ ಕಾಂಗ್ರೆಸ್ ಹೈಕಮಾಂಡೇ ಉತ್ತರಿಸಬೇಕಿದೆ.