2 ವರ್ಷಗಳ ಇಸ್ರೇಲ್ ಯುದ್ಧವನ್ನು ಕೊನೆಗೊಳಿಸುವ ಕುರಿತು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸುತ್ತಿದ್ದಾರೆ. ಈ ಬಗ್ಗೆ ಹಮಾಸ್ ಆಲೋಚಿಸುತ್ತಿರುವಾಗಲೇ, ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್ ವೈಮಾನಿಕ ದಾಳಿ ಮತ್ತು ಗುಂಡಿನ ದಾಳಿಯಲ್ಲಿ, ಕನಿಷ್ಠ 57 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ.
ಗಾಜಾ ನಗರದಲ್ಲಿ ಭಾರೀ ಬಾಂಬ್ ದಾಳಿ ನಡೆಸಿರುವ ಇಸ್ರೇಲ್, ಅಲ್ಲಿ ಉಳಿದುಕೊಂಡಿರುವ ಎಲ್ಲರನ್ನೂ ಭಯೋತ್ಪಾದಕರೆಂದು ಪರಿಗಣಿಸುವುದಾಗಿ ಘೋಷಿಸಿದೆ. ಈ ಕುರಿತು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗಾಜಾ ನಗರದ ದಕ್ಷಿಣಕ್ಕೆ ವಲಸೆ ಹೋಗಲು ಮತ್ತು ನಗರದಲ್ಲಿ ಹಮಾಸ್ ಕಾರ್ಯಕರ್ತರನ್ನು ಪ್ರತ್ಯೇಕವಾಗಿ ಬಿಡಲು ಬಯಸುವ, ಗಾಜಾ ನಿವಾಸಿಗಳಿಗೆ ಇದು ಕೊನೆಯ ಅವಕಾಶ. ಅಂತಿಮ ಎಚ್ಚರಿಕೆ ಬಳಿಕ ಯಾರಾದರೂ ನಗರದಲ್ಲಿ ಉಳಿದುಕೊಂಡರೆ ಅವರನ್ನು ಭಯೋತ್ಪಾದಕರು ಅಥವಾ ಭಯೋತ್ಪಾದಕರ ಬೆಂಬಲಿಗರು ಎಂದು ಪರಿಗಣಿಸಲಾಗುತ್ತದೆ ಎಂದು ನೇರವಾಗಿ ಬೆದರಿಕೆಯೊಡ್ಡಿದ್ದಾರೆ.
ಕಳೆದ ತಿಂಗಳು ಗಾಜಾವನ್ನು ವಶಪಡಿಸಿಕೊಳ್ಳಲು ಇಸ್ರೇಲ್ ಪ್ರಮುಖ ದಾಳಿಯನ್ನು ಪ್ರಾರಂಭಿಸಿದ ನಂತರ, ಸುಮಾರು 4,00,000 ಪ್ಯಾಲೆಸ್ಟೀನಿಯನ್ನರು ಗಾಜಾ ನಗರವನ್ನು ತೊರೆದಿದ್ದಾರೆ. ಜೊತೆಗೆ ಸಾವಿರಾರು ಜನರು ಇನ್ನೂ ಅಲ್ಲೇ ಉಳಿದಿದ್ದಾರೆ.