ತಮಿಳುನಾಡಿನ ಕರೂರು ಯಾರೂ ಊಹಿಸದ ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ಒಂದಲ್ಲ ಎರಡಲ್ಲ.. ಬರೋಬ್ಬರಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
TVK ಸಂಸ್ಥಾಪಕ, ಖ್ಯಾತ ನಟ ದಳಪತಿ ವಿಜಯ್, ಜನಸಂಪರ್ಕ ಹೆಸರಲ್ಲಿ ಬೃಹತ್ ರ್ಯಾಲಿ ಆಯೋಜಿಸಿರ್ತಾರೆ. ಸೆಪ್ಟೆಂಬರ್ 25ರಂದು ತಮಿಳುನಾಡು ಪೊಲೀಸರಿಗೆ, ಸೆಪ್ಟೆಂಬರ್ 27ರ ಮಧ್ಯಾಹ್ನ 3 ಗಂಟೆಯಿಂದ 10 ಗಂಟೆವರೆಗೂ ರ್ಯಾಲಿ ನಡೆಸಲು ಅನುಮತಿ ಮತ್ತು ಭದ್ರತೆ ನೀಡುವಂತೆ ಮನವಿ ಪತ್ರ ಸಲ್ಲಿಸಿದ್ರು.
ನಿಗದಿಯಂತೆ ಸೆಪ್ಟೆಂಬರ್ 27ರಂದು ಕರೂರಿನಲ್ಲಿ ರ್ಯಾಲಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ವಿಜಯ್ ಬರ್ತಾರೆ ಅಂತಾ ಅಭಿಮಾನಿಗಳೆಲ್ಲಾ, ಬೆಳಗ್ಗೆ 9ಗಂಟೆಯಿಂದಲೇ ಬರತೊಡಗಿದ್ದಾರೆ. ಆದ್ರೆ, ಮಧ್ಯಾಹ್ನ ಕಳೆದು ಸಂಜೆಯಾದ್ರೂ ದಳಪತಿ ವಿಜಯ್ ಬರಲೇ ಇಲ್ಲ. ಅದಾಗಲೇ ಮಹಿಳೆಯರು, ಮಕ್ಕಳು ಸೇರಿ ಹಲವರು, ನೀರು, ಆಹಾರವಿಲ್ಲದೇ ಸುಸ್ತಾಗಿದ್ರು.
10 ಸಾವಿರ ಜನರು ಸೇರಬಹುದೆಂದು ನಿರೀಕ್ಷಿಸಲಾಗಿತ್ತು. ಆದ್ರೆ 50 ಸಾವಿರಕ್ಕೂ ಹೆಚ್ಚು ಜನರು ಸೇರಿದ್ರು. ದಳಪತಿ ವಿಜಯ್ ರಾತ್ರಿ 7 ಗಂಟೆ ಸುಮಾರಿಗೆ ಬಂದಿದ್ದಾರೆ. ವಿಜಯ್ ಕಾರು ಬರುತ್ತಿದ್ದಂತೆ, ಹಿಂದೆಯೇ ಸಾವಿರಾರು ಜನರು ಓಡಿದ್ರು. ಇದೇ ವೇಳೆ ಸುಮಾರು 30 ನಿಮಿಷಗಳ ಕಾಲ ವಿದ್ಯುತ್ ಸಂಪರ್ಕ ಕಟ್ ಆಗುತ್ತೆ. ಸಾವಿರಾರು ಜನರು ಗಾಬರಿಗೊಂಡಿದ್ದು, ನೂಕುನುಗ್ಗಲು ಉಂಟಾಗಲು ಶುರುವಾಗುತ್ತೆ.
ಬಳಿಕ ಚುನಾವಣಾ ಪ್ರಚಾರ ವಾಹನ ಏರಿದ ವಿಜಯ್ ಮಾತನಾಡಲು ಆರಂಭಿಸಿದ್ರು. ಕೆಲವೇ ನಿಮಿಷಗಳಲ್ಲಿ, 9 ವರ್ಷದ ಬಾಲಕಿ ಕಾಣೆಯಾಗಿದ್ದಾಳೆಂಬ ಸುದ್ದಿ ಗೊತ್ತಾಗುತ್ತೆ. ವಿಜಯ್ ಮೈಕ್‌ನಲ್ಲೇ ಈ ಬಗ್ಗೆ ಘೋಷಿಸ್ತಾರೆ. ಅಷ್ಟರಲ್ಲಿ ಹಲವರು ಸುಸ್ತಾಗಿ ಕುಸಿದುಬಿದ್ದಿದ್ರು.
ಈ ವೇಳೆ ಭಾಷಣ ಅರ್ಧಕ್ಕೆ ನಿಲ್ಲಿಸಿದ ದಳಪತಿ ವಿಜಯ್, ಅಭಿಮಾನಿಗಳತ್ತಾ ನೀರಿನ ಬಾಟಲ್ ಎಸೆಯುತ್ತಾರೆ. ಪೊಲೀಸರಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ರು. ಆಂಬುಲೆನ್ಸ್ ಬರೋದಕ್ಕೂ ಜಾಗವಿಲ್ಲದಷ್ಟು ಜನರು ಜಮಾವಣೆಗೊಂಡಿದ್ರು.
ಅಷ್ಟರಲ್ಲಿ ಕಾಲ್ತುಳಿತ ಉಂಟಾಗಿ, ಕೆಳಗೆ ಬಿದ್ದು ಕೆಲವರು ಸಾವನ್ನಪ್ಪಿದ್ರೆ, ಇನ್ನೂ ಹಲವರು ಉಸಿರಾಟದ ಸಮಸ್ಯೆಯಿಂದಾಗಿ ಮೃತಪಟ್ಟಿದ್ರು. ಸುಮಾರು 7 ಗಂಟೆಯಿಂದ 9 ಗಂಟೆಯೊಳಗೆ, ಕರೂರು ಸಾವಿನ ಮನೆಯಾಗಿ ಮಾರ್ಪಾಡಾಗಿತ್ತು.
ಕಾರ್ಯಕ್ರಮಕ್ಕೆ ಬರುವಾಗ ರಸ್ತೆ ಮಾರ್ಗವಾಗಿ ಬಂದಿದ್ದ ವಿಜಯ್, ಕಾಲ್ತುಳಿತ ಸಂಭವಿಸುತ್ತಿದ್ದಂತೆಯೇ ತಿರುಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ಚೆನ್ನೈಗೆ ಹೋಗಿದ್ದಾರೆ. ರಾತ್ರಿ 10 ಗಂಟೆ 10 ನಿಮಿಷಕ್ಕೆ ಚಾರ್ಟರ್ಡ್ ವಿಮಾನದಲ್ಲಿ ತೆರಳಿದ್ದಾರೆ.
ಕರೂರು ಕಾಲ್ತುಳಿತ ದುರಂತ ಬಳಿಕ, ಪಟ್ಟಣ ಪೊಲೀಸರು ಸ್ವಯಂಪ್ರೇರಿತರಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಟಿವಿಕೆ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ಮತಿಯಳಗನ್ ಸೇರಿದಂತೆ ಹಲವರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 109, 110, 125ಬಿ, 223ರ ಅಡಿಯಲ್ಲಿ ಕೇಸ್ ದಾಖಲಾಗಿದೆ.
ಸೆಕ್ಷನ್ 109 ಮತ್ತು 110 ಕ್ರಮವಾಗಿ ಕೊಲೆ ಯತ್ನ ಮತ್ತು ಅಪರಾಧಿಕ ನರಹತ್ಯೆಗೆ ಯತ್ನಿಸುವ ಪ್ರಕರಣಗಳಾಗಿವೆ. ಸೆಕ್ಷನ್ 125 ದುಡುಕಿನ ಅಥವಾ ನಿರ್ಲಕ್ಷ್ಯದ ವರ್ತನೆಯ ಮೂಲಕ, ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕೃತ್ಯಗಳನ್ನು ಉಲ್ಲೇಖಿಸುತ್ತದೆ. ಸೆಕ್ಷನ್ 223 – ಸಾರ್ವಜನಿಕ ಸೇವಕರು ಆದೇಶ ಪಾಲಿಸದಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಒಟ್ನಲ್ಲಿ, ಕರೂರು ದುರಂತ ಬೆಂಗಳೂರು ಕಾಲ್ತುಳಿತ ದುರಂತವನ್ನೇ ಮೀರಿಸಿದೆ.