ಯುವತಿಯ ಮನೆಯವರ ವಿರುದ್ಧ ಕೊಲೆ ಯತ್ನ ಆರೋಪಿಸಿ, ಎಸ್‌ಪಿ ಕಚೇರಿಯಲ್ಲೇ ನವ ಜೋಡಿ ಬೀಡುಬಿಟ್ಟಿದೆ. ಅಂತರ್ಜಾತಿ ವಿವಾಹವಾದ ಮಗಳ ಮೇಲೆ ಕುಟುಂಬಸ್ಥರು ಕೆಂಡಕಾರ್ತಿದ್ದು, ಯುವಕನ ಮನೆಗೆ ನುಗ್ಗಿ ದಾಂದಲೆ ಎಬ್ಬಿಸಿದ್ದಾರೆ. ಕೊಲೆ ಮಾಡಲು ಯತ್ನಿಸಿದ್ದರಂತೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಘಟನೆ ಸಂಭವಿಸಿದೆ.
ಇಡಿಗ ಸಮುದಾಯದ 19 ವರ್ಷದ ಸುಶ್ಮಿತಾ ಮತ್ತು 24 ವರ್ಷದ ದಲಿತ ಸಮುದಾಯದ ಯತೀಶ್ , ಪ್ರೀತಿಸುತ್ತಿದ್ರು. ಸೆಪ್ಟೆಂಬರ್ 1ರಂದು ದಾಬಸ್ ಪೇಟೆ ಬಳಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.
ಯುವತಿ ಕುಟುಂಬಸ್ಥರು, ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲೇ ರಾಜಿ ಪಂಚಾಯ್ತಿ ನಡೆದಿದೆ. ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಆದ್ರೆ, ಸುಶ್ಮಿತಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೆ, ಸೆಪ್ಟೆಂಬರ್ 3ರ ಬುಧವಾರ ರಾತ್ರಿ, 50-60 ಜನರ ಗುಂಪು, ತೀರ್ಥಪುರದ ಯತೀಶ್ ಮನೆಗೆ ನುಗ್ಗಿ ದಾಂದಲೆ ಮಾಡಿದ್ದಾರೆ. ಕೊಲೆ ಯತ್ನ ಮಾಡಿದ್ದಾರೆಂದು ಆರೋಪಿಸಲಾಗಿದೆ. ದಾಳಿಯಿಂದ ತಪ್ಪಿಸಿಕೊಂಡು ಗ್ರಾಮವನ್ನೇ ತೊರೆದಿದ್ದ ಯತೀಶ್ ಪೋಷಕರು, ರಾತ್ರಿಯಿಡಿ ತೋಟದ ಪೊದೆಗಳಲ್ಲಿ ಅವಿತುಕೊಂಡಿದ್ರಂತೆ.
ರಾತ್ರಿಯಿಡಿ ನವಜೋಡಿ ಊರೂರು ಸುತ್ತಾಡುತ್ತಾ, ಕಾರಿನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್ 4ರಂದು ಬೆಳಗ್ಗೆ ಎಸ್ಪಿ ಕಚೇರಿಗೆ ಬಂದು ರಕ್ಷಣೆ ಕೋರಿದ್ದಾರೆ. ಎಸ್‌ಪಿ ಅಶೋಕ್ ಕೆ.ವಿ. ಅವರಿಗೆ ದೂರು ನೀಡಿದ್ದು, ಪೊಲೀಸರ ರಕ್ಷಣೆಯಲ್ಲಿ ಊರಿಗೆ ಕಳಿಸಿಕೊಡಲಾಗಿದೆ ಎನ್ನಲಾಗಿದೆ.