ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸಚಿವ ಪ್ರಿಯಾಂಕ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಆ ಬಳಿಕ ತಮಗೆ ನಿರಂತರವಾಗಿ ಬೆದರಿಕೆ ಕರೆಗಳು ಬಂದಿರುವುದಾಗಿ ಅವರು ಬಹಿರಂಗವಾಗಿಯೆ ಆರೋಪಿಸಿದ್ದಾರೆ. ಈಗ ಪ್ರತ್ಯಕ್ಷವಾಗಿ ಒಂದು ಬೆದರಿಕೆ ಕರೆಯ ಆಡಿಯೋ ರೆಕಾರ್ಡ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಅಶ್ಲೀಲ ಹಾಗೂ ಅವಾಚ್ಯ ಭಾಷೆ ಬಳಕೆಯ ಕರೆ ವಿರುದ್ಧ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಖರ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಆಡಿಯೋ ರೆಕಾರ್ಡ್ ಮತ್ತು ತಮ್ಮ ಪ್ರತಿಕ್ರಿಯೆಯ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದು ನಿರಂತರವಾಗಿ ನನಗೆ ಬರುತ್ತಿರುವ ನಿಂದನಾ ಕರೆಗಳಲ್ಲೊಂದು ಉದಾಹರಣೆ ಮಾತ್ರ ಎಂದು ತಿಳಿಸಿದ್ದಾರೆ. RSS ಯುವಕರ, ಮಕ್ಕಳ ಮನಸುಗಳಲ್ಲಿ ಕಲ್ಮಶ ತುಂಬುವ ಕೆಲಸ ಮಾಡುತ್ತಿದೆ ಎಂದಿದ್ದೆ, ಅವರು ತುಂಬಿದ ಕಲ್ಮಶವು ಹೇಗಿರುತ್ತದೆ ಎಂಬುದಕ್ಕೆ ಸಣ್ಣ ಉದಾಹರಣೆ ಇಲ್ಲಿದೆ ಎಂದಿದ್ದಾರೆ.
ಕೆಲವು ದಿನಗಳಿಂದ ನನಗೆ ನಿರಂತರವಾಗಿ ಬರುತ್ತಿದ್ದ ಬೆದರಿಕೆ ಮತ್ತು ನಿಂದನೆಯ ಕರೆಗಳಲ್ಲಿ ಇದೊಂದು ಸ್ಯಾಂಪಲ್ ಅಷ್ಟೇ. ತಾಯಿ, ಸಹೋದರಿಯರ ಹೆಸರು ಹಿಡಿದು ಅತ್ಯಂತ ಕೆಟ್ಟದಾಗಿ ನಿಂದಿಸುವುದೇ ಶಾಖೆಗಳಲ್ಲಿ ನೀಡುವ ಸಂಸ್ಕಾರವೇ? ಅಂತ ಪ್ರಶ್ನಿಸಿದ್ದಾರೆ.
BY ವಿಜಯೇಂದ್ರ, R ಅಶೋಕ್, CT ರವಿ, ಕಾರ್ಕಳ ಸುನಿಲ್, ಚಲುವಾದಿ ನಾರಾಯಣಸ್ವಾಮಿ, ಪ್ರತಾಪ್ ಸಿಂಹ ಅವರನ್ನ ಮೆನ್ಶನ್ ಮಾಡಿ ಮೋದಿ ಹಾಗೂ ಮೋಹನ್ ಭಾಗವತ್ ಅವರ ತಾಯಿಯಂದಿರಿಗೆ ಇದೇ ಬಗೆಯಲ್ಲಿ ನಿಂದಿಸುವುದನ್ನು ನೀವು ಹಾಗು ಮುಂತಾದ ಬಿಜೆಪಿ ನಾಯಕರು ಒಪ್ಪುತ್ತಾರೆಯೇ? ಅಂತ ಪ್ರಶ್ನಿಸಿದ್ದಾರೆ.
ನಾನು ದೂರು ನೀಡಿದರೆ ಆ ವ್ಯಕ್ತಿಯ ಬದುಕಿನಲ್ಲಿ ಹಾನಿಯಾಗುತ್ತದೆಯೇ ಹೊರತು ಆತನನ್ನು ಇಂತಹ ಮನಸ್ಥಿತಿಗೆ ತಳ್ಳಿದವರಿಗೆ ಯಾವ ಹಾನಿಯೂ ಆಗುವುದಿಲ್ಲ.ನಮ್ಮದು ವ್ಯಕ್ತಿಗಳ ವಿರುದ್ಧದ ಹೋರಾಟವಲ್ಲ, RSS ಪಸರಿಸುತ್ತಿರುವ ಈ ಕೊಳಕು ಮನಸ್ಥಿತಿಯ ವಿರುದ್ಧದ ಹೋರಾಟ, ಮುಗ್ದರನ್ನು ಬ್ರೈನ್ ವಾಶ್ ಮಾಡಿ ಅವರ ಚಿಂತನೆಗಳನ್ನು ಕಲುಷಿತಗೊಳಿಸುತ್ತಿರುವ ಕ್ಷುದ್ರ ಶಕ್ತಿಗಳ ವಿರುದ್ಧದ ಹೋರಾಟ ಎಂದಿದ್ದಾರೆ.
ವರದಿ : ಲಾವಣ್ಯ ಅನಿಗೋಳ