ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಗಳು ಈ ವರ್ಷದ ಏಪ್ರಿಲ್ 30ರೊಳಗೆ ಸಂಪೂರ್ಣವಾಗಿ ಪೂರ್ಣಗೊಳ್ಳಲಿವೆ. ಯೋಜನೆಯ ಒಟ್ಟಾರೆ ವೆಚ್ಚ ಸುಮಾರು 1,900 ಕೋಟಿ ರೂಪಾಯಿ ಎಂದು ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
ರಾಮ ಮಂದಿರ ನಿರ್ಮಾಣ ಸಮಿತಿಯ ಎರಡು ದಿನಗಳ ಸಭೆಯ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಮಿಶ್ರಾ, ಸ್ಥಳದಲ್ಲಿ ಪ್ರಮುಖ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ L&T ಹಾಗೂ ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಗಳು ಏಪ್ರಿಲ್ 30ರೊಳಗೆ ಎಲ್ಲಾ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ದೇವಾಲಯ ಸಂಕೀರ್ಣದಿಂದ ನಿರ್ಗಮಿಸಲಿವೆ ಎಂದು ಹೇಳಿದರು.
ಇದೇ ವೇಳೆ ಎಲ್ಲಾ ದಾಖಲೆ ಕಾರ್ಯಗಳು ಹಾಗೂ ಬಿಲ್ ಪಾವತಿ ಪ್ರಕ್ರಿಯೆಗಳನ್ನೂ ಅದೇ ದಿನಾಂಕದೊಳಗೆ ಮುಗಿಸಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಎಲ್ & ಟಿ ಮತ್ತು ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಗಳು ತಾವು ನಿರ್ವಹಿಸಿರುವ ಕಾಮಗಾರಿಗಳಿಗೆ ಮೂರು ವರ್ಷಗಳ ಖಾತರಿಯನ್ನು ನೀಡಿವೆ.
ನಿರ್ವಹಣೆ ಹಾಗೂ ದುರಸ್ತಿ ಕಾರ್ಯಗಳಿಗಾಗಿ ಎರಡೂ ಕಂಪನಿಗಳ ಸಣ್ಣ ತಂಡಗಳನ್ನು ಮಂದಿರ ಸಂಕೀರ್ಣದಲ್ಲೇ ನಿಯೋಜಿಸಲಾಗುವುದು ಎಂದು ಮಿಶ್ರಾ ವಿವರಿಸಿದರು. ಏಪ್ರಿಲ್ 30ರ ನಂತರ, ಎಲ್ & ಟಿ, ಟಾಟಾ ಕನ್ಸಲ್ಟೆನ್ಸಿ ಹಾಗೂ ರಾಜ್ಯ ನಿರ್ಮಾಣ ನಿಗಮದೊಂದಿಗೆ ಇರುವ ಎಲ್ಲಾ ಒಪ್ಪಂದಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಹಿಸಿಕೊಳ್ಳಲಿದೆ ಎಂದು ಅವರು ಹೇಳಿದರು.
ವೆಚ್ಚದ ವಿವರ ನೀಡಿದ ಮಿಶ್ರಾ, ರಾಮ ಮಂದಿರ ಯೋಜನೆಯ ಒಟ್ಟು ಅಂದಾಜು ವೆಚ್ಚ ಸುಮಾರು ₹1,900 ಕೋಟಿ ಆಗಿದ್ದು, ಇದರಲ್ಲಿ ಜಿಎಸ್‌ಟಿ ಸೇರಿ ಈಗಾಗಲೇ ಸುಮಾರು ₹1,600 ಕೋಟಿ ಪಾವತಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ರಾಮ ಮಂದಿರ ನಿರ್ಮಾಣದ ಅಂತಿಮ ಹಂತಕ್ಕೆ ಕಾಮಗಾರಿಗಳು ತಲುಪಿರುವ ಹಿನ್ನೆಲೆಯಲ್ಲಿ, ಏಪ್ರಿಲ್ ಅಂತ್ಯದೊಳಗೆ ಸಂಪೂರ್ಣ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.
ವರದಿ : ಲಾವಣ್ಯ ಅನಿಗೋಳ




