ದೆಹಲಿ: ಅಯೋಧ್ಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ಕುರಿತಂತೆ ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಬಗ್ಗೆ ಯಾವುದೇ ರೀತಿಯ ವಿವಾದಾಸ್ಪದ ಹೇಳಿಕೆ ನೀಡಬಾರದೆಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪಕ್ಷದ ಮುಖಂಡರಿಗೆ ಆದೇಶಿಸಿದ್ದಾರೆ.
ತೀರ್ಪಿನ ಬಗ್ಗೆ ಪಕ್ಷದ ಧೋರಣೆ ಅನುಸರಿಸುವಂತೆ ಉತ್ತರಪ್ರದೇಶ ಕಾಂಗ್ರೆಸ್ ನಾಯಕರಿಗೆ ಸೂಚಿಸಿದ್ದಾರೆ. ಪಕ್ಷದ ಅಭಿಪ್ರಾಯ ಹೊರಬೀಳುವವರೆಗೂ ಯಾವುದೇ ಬಹಿರಂಗ ಹೇಳಿಕೆ ನೀಡಬಾರದು ಎಂದು ತಿಳಿಸಿದ್ದಾರೆ.ಪ್ರತಿಯೊಬ್ಬರೂ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿರಬೇಕು.
ಕಳೆದ ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ 370 ವಿಧಿ ರದ್ದು ಮಾಡಿದಾಗ, ಪಕ್ಷದ ಅಭಿಪ್ರಾಯದ ವಿರುದ್ಧವಾಗಿ ಕೆಲ ನಾಯಕರು ಮಾತನಾಡಿದ್ದರು.ಮತ್ತೆ ಕೆಲವರು ಕೇಂದ್ರ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ ಅಂತಹ ಗೊಂದಲದ ವಾತಾವರಣ ಮತ್ತೊಮ್ಮೆ ನಿರ್ಮಾಣವಾಗದಂತೆ ಎಚ್ಚರಿಕೆ ವಹಿಸಲು ಉತ್ತರಪ್ರದೇಶದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಸಲಹಾ ಸಮಿತಿ ಸಭೆಯಲ್ಲಿ ಪ್ರಿಯಾಂಕ ಗಾಂಧಿ ಪಕ್ಷದ ಪ್ರಮುಖರಿಗೆ ಈ ಸೂಚನೆ ನೀಡಿದ್ದಾರೆ.ಸುಧೀರ್ಘ ಕಾಲ ನಡೆದ ಅಯೋಧ್ಯ ಭೂವಿವಾದ ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ಈ ತಿಂಗಳ 17 ರೊಳಗೆ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.