Wednesday, August 20, 2025

Latest Posts

ಬಚ್ಚನ್ ಮನೆ ಮುಳುಗಡೆ – ಮುಂಬೈಗೆ ಬಿಗ್ ಶಾಕ್‌!

- Advertisement -

ವಾಣಿಜ್ಯ ನಗರಿ ಮುಂಬೈ ಭೀಕರ ಮಳೆಗೆ ತತ್ತರಿಸಿದೆ. ನಗರದೆಲ್ಲೆಡೆ ಕಳೆದ 3 ದಿನಗಳಿಂದ ನಿರಂತರ ಸುರಿದ ಮಳೆ ಭಾರೀ ಅವಾಂತರವನ್ನ ಸೃಷ್ಟಿಸಿದೆ. ಕೇವಲ 6 ಗಂಟೆಗಳಲ್ಲಿ 200 ಮಿಲಿ ಮೀಟರ್ ಮಳೆಯಾಗಿದೆ. ಇಡೀ ಮುಂಬೈ ನಗರವೇ ನೀರಿನಲ್ಲಿ ಮುಳುಗಿದ ಸ್ಥಿತಿಗೆ ತಲುಪಿದೆ. ಮಳೆಯ ಭೀಕರತೆಯಿಂದಾಗಿ 5 ದಿನಗಳಲ್ಲಿ 21 ಜನರು ಸಾವನ್ನಪ್ಪಿದ್ದಾರೆ.

ಹವಾಮಾನ ಇಲಾಖೆ ಕಳೆದ 3 ದಿನಗಳಿಂದ ಮುಂಬೈಗೆ ರೆಡ್ ಅಲರ್ಟ್ ಘೋಷಿಸಿ ಮುನ್ನೆಚ್ಚರಿಕೆ ನೀಡಿತ್ತು. ಈಗಾಗಲೇ ನಗರದ ಬಹುಪಾಲು ರಸ್ತೆ ಮಾರ್ಗಗಳು ಜಲಮಯಗೊಂಡಿದೆ. ಜನಜೀವನ, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮುಂಬೈನ ಏರ್ಪೋಟ್‌​ಗೂ ನೀರು ನುಗ್ಗಿದ್ದು, ವಿಮಾನಯಾನ ವ್ಯತ್ಯಯದಿಂದ ಪ್ರಯಾಣಿಕರು ಪರಿತಪಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಆಗಸ್ಟ್ 21ರವರೆಗೆ ಭಾರೀ ಮಳೆಯ ಮುನ್ಸೂಚನೆ ಇದೆ.

ರೈಲು ಸಂಚಾರವನ್ನೇ ನಂಬಿಕೊಂಡಿರುವ ಮುಂಬೈ ಜನರಿಗೆ ಈ ಬಾರಿ ಮಳೆ ದೊಡ್ಡ ಶಾಕ್ ನೀಡಿದೆ. ವಿದ್ಯುತ್ ವ್ಯತ್ಯಯದಿಂದ ರೈಲು ಸಂಚಾರ ಅಸ್ತವ್ಯಸ್ತವಾಗಿದೆ. ಮೊನೋ ರೈಲು ಎರಡು ನಿಲ್ದಾಣಗಳ ಮಧ್ಯೆ ನಿಂತು ಹೋಗಿ ಸುಮಾರು 800ಕ್ಕೂ ಹೆಚ್ಚು ಪ್ರಯಾಣಿಕರು ರೈಲಿನೊಳಗೆ ಸಿಲುಕಿದ ದೃಶ್ಯಗಳು ದಿಗ್ಬ್ರಮೆಗೊಳಿಸಿವೆ. ಉಸಿರಾಟದ ತೊಂದರೆಗೆ ಒಳಗಾದ ಪ್ರಯಾಣಿಕರನ್ನ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಕ್ರೇನ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.

ಮಳೆ ಪರಿಣಾಮದಿಂದಾಗಿ ಮುಂಬೈ ಸೇರಿದಂತೆ ಹಲವೆಡೆ ಶಾಲೆಗಳಿಗೆ ರಜೆ ಘೋಷಣೆಯಾಗಿದೆ. ಖಾಸಗಿ ಕಂಪನಿಗಳಿಂದ ವರ್ಕ್ ಫ್ರಮ್ ಹೋಮ್‌ಗೆ ಸೂಚನೆ ನೀಡಿದೆ. ವಿದ್ಯುತ್ ವ್ಯತ್ಯಯ, ಸಂಚಾರ ಅಡಚಣೆ, ರೈಲುಗಳು ನಿಂತು ಹೋಗುವ ಸ್ಥಿತಿ ಉಂಟಾಗಿದೆ.

ಸಾಮಾನ್ಯ ಜನರಷ್ಟೇ ಅಲ್ಲದೆ ಬಾಲಿವುಡ್ ತಾರೆಯರೂ ಮಳೆಯ ಅಬ್ಬರಕ್ಕೆ ತತ್ತರಿಸಿದ್ದಾರೆ. ಅಮಿತಾಬ್ ಬಚ್ಚನ್ ಅವರ ಜುಹುವಿನಲ್ಲಿರುವ ‘ಪ್ರತೀಕ್ಷಾ’ ಬಂಗಲೆ ನೀರಿನಲ್ಲಿ ಮುಳುಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮನೆ ಹೊರಗಡೆ ಮೊಣಕಾಲು ಎತ್ತರದವರೆಗೆ ನೀರು ತುಂಬಿರುವ ದೃಶ್ಯವೊಂದು ಭೀತಿಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ, ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದು, ಮಳೆಯ ಭೀಕರತೆ ಬಯಲಾಗುತ್ತಿದೆ. ನಗರದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ರಾಜ್ಯ ಸರ್ಕಾರ ಮತ್ತು ಅಗ್ನಿಶಾಮಕ ಸಿಬ್ಬಂದಿಯಿಂದ ನಿರಂತರ ಸಹಾಯ ಕಾರ್ಯ ನಡೆಯುತ್ತಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss