ರಾಜಕಾರಣದಲ್ಲಿ ಯಾರು ಶತ್ರುಗಳು ಅಲ್ಲ.. ಯಾರು ಮಿತ್ರರೂ ಅಲ್ಲ ಅನ್ನೋ ಮಾತಿದೆ.. ಈ ಮಾತನ್ನ ನಾವು ಈಗ್ಯಾಕೆ ಹೇಳ್ತಿದ್ದೀವಿ ಅಂದ್ರೆ, ಕಾಂಗ್ರೆಸ್ನ ಸಚಿವ ಹಾಗೂ ಬಿಜೆಪಿ ಶಾಸಕ ಬೀಗರಾಗಿದ್ದಾರೆ.
ಹೌದು ವೀಕ್ಷಕರೇ.. ಸಿದ್ದರಾಮಯ್ಯ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್, ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ಬೀಗರಾಗಿದ್ದಾರೆ. ಈ ಮೂಲಕ ಬೇರೆ ಬೇರೆ ಪಕ್ಷದ ನಾಯಕರಿಬ್ಬರೂ ಸಂಬಂಧಿಕರಾಗಿದ್ದಾರೆ. ಇದೊಂದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿರೋದು ವಿಶೇಷ.. ಅರಮನೆ ಮೈದಾನದಲ್ಲಿ 2025ರ ಫೆಬ್ರವರಿಯಲ್ಲಿ ವಿವಾಹ ನಡೆಯಲಿದೆ. ವಿವಾಹದ ದಿನಾಂಕವನ್ನು ಸಹ ಈಗಾಗಲೇ ಎಸ್. ಆರ್. ವಿಶ್ವನಾಥ್ ಘೋಷಣೆ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಯಲಹಂಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎಸ್. ಆರ್. ವಿಶ್ವನಾಥ್ ಅವರು, ಭೈರತಿ ಸುರೇಶ್ ಮತ್ತು ನಾನು ಸಂಬಂಧಿಕರಾಗುತ್ತಿದ್ದೇವೆ. ನನ್ನ ಪುತ್ರಿ ಭೈರತಿ ಸುರೇಶ್ ಪುತ್ರನ ಜೊತೆ ವಿವಾಹವಾಗುತ್ತಿದ್ದಾರೆ ಎಂದು ಘೋಷಣೆ ಮಾಡಿದ್ದರು. ಅದರಂತೆ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಎಸ್. ಆರ್. ವಿಶ್ವನಾಥ್ ಅವರ ಪುತ್ರಿ ಅಪೂರ್ವ ಹಾಗೂ ಸಚಿವ ಭೈರತಿ ಸುರೇಶ್ ಅವರ ಪುತ್ರ ಸಂಜಯ್ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು.
ಸಂಜಯ್ ಹಾಗೂ ಅಪೂರ್ವ ಇಬ್ಬರು ಮಲ್ಲೇಶ್ವರಂ ನ ವಿದ್ಯಾಮಂದಿರದಲ್ಲಿ ಶಿಕ್ಷಣವನ್ನು ಪಡೆದುಕೊಂಡಿದ್ದರು. ಇಬ್ಬರ ನಡುವೆ ಕಾಲೇಜು ದಿನಗಳ ಸಮಯದಲ್ಲೇ ಉತ್ತಮ ಸ್ನೇಹಿವಿತ್ತು ಎನ್ನಲಾಗಿದ್ದು, ಆ ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರಂತೆ. ಎರಡೂ ಕುಟುಂಬದ ಸಮ್ಮತಿ ಮೇರೆಗೆ ಮದುವೆ ನಿಶ್ಚಯವಾಗಿದೆ.
ಈ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಪತ್ನಿ ಉಷಾ ಸೇರಿದಂತೆ ಹಲವಾರು ರಾಜಕೀಯ ನಾಯಕರು ಭಾಗಿಯಾಗಿ ಹೊಸ ಜೋಡಿಗೆ ಶುಭ ಹಾರೈಸಿದರು.