ಬಂಡೆ ಸ್ಟೈಲ್ ರಾಜತಂತ್ರ: ₹13,070 ಕೋಟಿ ಡೀಲ್!

ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಕರ್ನಾಟಕ ಮತ್ತೊಮ್ಮೆ ಜಾಗತಿಕ ಗಮನ ಸೆಳೆದಿದೆ. DCM DK ಶಿವಕುಮಾರ್ ಹಾಗೂ ಕೈಗಾರಿಕಾ ಸಚಿವ M.B ಪಾಟೀಲ್ ನೇತೃತ್ವದ ರಾಜ್ಯದ ಉನ್ನತ ಮಟ್ಟದ ನಿಯೋಗ ಹೂಡಿಕೆ ಆಕರ್ಷಿಸುವಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಈ ಬಾರಿಯ ದಾವೋಸ್ ಸಮಾವೇಶದಲ್ಲಿ ಕರ್ನಾಟಕಕ್ಕೆ ಸುಮಾರು ₹13,070 ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವನೆಗಳಿಗೆ ಒಡಂಬಡಿಕೆಗಳು ನಡೆದಿವೆ.

ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ದಾವೋಸ್‌ಗೆ ತೆರಳುವುದು ಸಾಮಾನ್ಯವಾದರೂ, ಈ ಬಾರಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಉನ್ನತ ಮಟ್ಟದ ನಿಯೋಗದ ನೇತೃತ್ವ ವಹಿಸಿದ್ದರು. ನಂತರ ಡಿಸಿಎಂ ಡಿ.ಕೆ.ಶಿವಕುಮಾರ್ ಎರಡು ದಿನಗಳ ಬಳಿಕ ತಂಡಕ್ಕೆ ಸೇರ್ಪಡೆಯಾದರು.

ಜಾಗತಿಕ ಉದ್ಯಮ ದಿಗ್ಗಜರೊಂದಿಗೆ ನಡೆದ ಸಭೆಗಳಲ್ಲಿ ಕರ್ನಾಟಕದಲ್ಲಿನ ಹೊಸ ವಲಯದ ಹೂಡಿಕೆ ಅವಕಾಶಗಳನ್ನು ರಾಜ್ಯದ ನಿಯೋಗ ವಿವರವಾಗಿ ಪ್ರಸ್ತುತಪಡಿಸಿತು. ಐದು ದಿನಗಳ ಸಮಾವೇಶದಲ್ಲಿ 45ಕ್ಕೂ ಹೆಚ್ಚು ಸಭೆಗಳು ಮತ್ತು ಸಮಾಲೋಚನೆಗಳು ನಡೆದಿದ್ದು, ಕೃತಕ ಬುದ್ಧಿಮತ್ತೆ, ಜಾಗತಿಕ ಸಾಮರ್ಥ್ಯ ಕೇಂದ್ರಗಳು, ಸಂಶೋಧನೆ ಮತ್ತು ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ದೇಶದ ಪ್ರಮುಖ ಹೂಡಿಕೆ ತಾಣವನ್ನಾಗಿ ರೂಪಿಸಲು ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಉದ್ಯಮ ದಿಗ್ಗಜರೊಂದಿಗೆ ನಡೆದ ಚರ್ಚೆಗಳು ರಾಜ್ಯಕ್ಕೆ ಹೊಸ ಬಂಡವಾಳ ಹೂಡಿಕೆ ಹರಿವಿಗೆ ಗಟ್ಟಿಯಾದ ಬುನಾದಿ ಹಾಕಿವೆ. ಈಗಾಗಲೇ ಜಾರಿಯಲ್ಲಿರುವ ಯೋಜನೆಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಸಚಿವರು ತಿಳಿಸಿದ್ದಾರೆ.R.P ಸಂಜೀವ್ ಗೋಯೆಂಕಾ ಸಮೂಹವು ಮುಂದಿನ ಮೂರು ವರ್ಷಗಳಲ್ಲಿ ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ₹10,500 ಕೋಟಿ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದೆ.

ಜೊತೆಗೆ ಫ್ರಾನ್ಸ್ ಮೂಲದ ಮಿಸ್ಟ್ರಲ್ AI ಸಂಸ್ಥೆ ಬೆಂಗಳೂರಿನಲ್ಲಿ ಹಂತ ಹಂತವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಆಸಕ್ತಿ ತೋರಿದೆ. ಒಟ್ಟಾರೆ ರಾಜ್ಯದ ಅಭಿವೃದ್ಧಿಗೆ ಇದು ಹೊಸ ದಿಕ್ಕು ನೀಡಲಿದೆ ಎಂಬ ವಿಶ್ವಾಸ ಸರ್ಕಾರ ವ್ಯಕ್ತಪಡಿಸಿದೆ.

ವರದಿ : ಲಾವಣ್ಯ ಅನಿಗೋಳ

About The Author