ಕರ್ನಾಟಕ ಟಿವಿ ಬೆಂಗಳೂರು : ಕುಂಬಾರರು, ನೇಕಾರರು, ಚಮ್ಮಾರರು, ಬಡಗಿಗಳು, ವಿಶ್ವಕರ್ಮರು, ಬುಡಕಟ್ಟು ಜನಾಂಗದವರು, ಹಮಾಲಿಗಳು, ಗಾಣಿಗರು, ಮೀನುಗಾರರು, ಕಸ ಗುಡಿಸುವವರು, ಆಟೋ ರಿಕ್ಷಾ, ಕ್ಯಾಬ್, ಲಾರಿ ಚಾಲಕರು, ಕ್ಲೀನರ್ ಗಳು ಸೇರಿದಂತೆ ವೃತ್ತಿ ಆಧಾರಿತ ಕಾರ್ಮಿಕರಿಗೆ ಮಾಸಿಕ ತಲಾ 10 ಸಾವಿರ ರೂಪಾಯಿ ಸಹಾಯಧನ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮಾಧ್ಯಮಗೋಷ್ಠಿ ನಡೆಸಿದ ಡಿ.ಕೆ. ಶಿವಕುಮಾರ್, ಮೆಕಾನಿಕ್ ಗಳು, ಹೋಟೆಲ್ ಸಪ್ಲೈಯರ್, ಹೋಟೆಲ್ ಕ್ಲೀನರ್, ಬೀದಿ ಬದಿ ವ್ಯಾಪಾರಿ, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವವರು, ಹೂವು, ಹಣ್ಣು, ಸೊಪ್ಪು ಮಾರುವವರು, ಹೂವು ಕಟ್ಟುವವರು, ಪಾನಿಪುರಿ ವ್ಯಾಪಾರಿಗಳು, ಬೀದಿ ಬದಿ ಇಡ್ಲಿ, ದೋಸೆ ಮಾರಿಕೊಂಡು ಜೀವನ ಸಾಗಿಸುತ್ತಿದ್ದವರು, ಕೆತ್ತನೆ, ಕುಸರಿ ಕೆಲಸ ಮಾಡುವವರು, ಕಮ್ಮಾರರು, ಕಲ್ಲು ಒಡೆಯುವವರು, ಕ್ಷೌರಿಕರು, ದರ್ಜಿಗಳು, ಕುಶಲ ಕರ್ಮಿಗಳು, ಬೀಡಿ ಕಟ್ಟುವವರು, ಲಾರಿಗೆ ಸಾಮಾನು ಲೋಡ್ ಮಾಡುವವರು, ಹಳ್ಳಿಕಡೆ ಏರ್ ಪಿನ್, ಗೊಂಬೆ ಮಾರುವವರು, ಗುಜರಿ ವ್ಯಾಪಾರಿಗಳು ಕೂಡ ಈ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಲಿದ್ದು, ಈ ಎಲ್ಲ ವರ್ಗದವರ ಹಿತ ಕಾಯುವುದು ಸರ್ಕಾರದ ಕರ್ತವ್ಯ. ಆದರೆ ಈವರೆಗೂ ಪ್ರಧಾನಿ ಮೋದಿ ಅವರಾಗಲಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಲಿ ಈ ವರ್ಗದ ಬಗ್ಗೆ ಒಂದೇ ಒಂದು ಮಾತು ಆಡದಿರುವುದು, ಅವರ ನೆರವಿಗೆ ಬಾರದಿರುವುದು ತಮಗೆ ಅತೀವ ನೋವು ತಂದಿದೆ. ನಾಳೆಯೇ ಮುಖ್ಯಮಂತ್ರಿಗಳ ಬಳಿಗೆ ಕಾಂಗ್ರೆಸ್ ನಿಯೋಗ ತೆಗೆದುಕೊಂಡು ಹೋಗಿ ಅವರ ಪರವಾಗಿ ಖುದ್ದು ಮನವಿ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗ ಮುಖ್ಯಸ್ಥ ವಿ.ಎಸ್ ಉಗ್ರಪ್ಪ ಉಪಸ್ಥಿತರಿದ್ದರು.
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ, ಬೆಂಗಳೂರು.