Monday, November 17, 2025

Latest Posts

ಬಾಂಗ್ಲಾದಲ್ಲಿ ‘ಗಲ್ಲು’ ತೀರ್ಪು, ಶೇಖ್ ಹಸೀನಾ ಭವಿಷ್ಯ ಏನು?

- Advertisement -

ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನ ಉಚ್ಛಾಟಿಸಲಾಗಿದೆ. ಇವರ ವಿರುದ್ದದ ಪ್ರಕರಣದಲ್ಲಿ ನ್ಯಾಯಾಲಯವು ಮರಣದಂಡನೆ ವಿಧಿಸಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದ ದಂಗೆ ಮತ್ತು ಸಾಮೂಹಿಕ ಹತ್ಯೆಗಳ ಪ್ರಕರಣದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳು ನಡೆದಿರುವುದಾಗಿ ನ್ಯಾಯಾಲಯ ತೀರ್ಮಾನಿಸಿದೆ.

ಪ್ರೇರಣೆಗೆ ಪ್ರಚೋದನೆ, ಕೊಲ್ಲಲು ಆದೇಶ ಹಾಗೂ ದೌರ್ಜನ್ಯಗಳನ್ನು ತಡೆಯಲು ವಿಫಲವಾಗಿರುವ ಮೂರು ಗಂಭೀರ ಆರೋಪಗಳಲ್ಲಿ ಶೇಖ್ ಹಸೀನಾ ತಪ್ಪಿತಸ್ಥರು. ಅವರಿಗೆ ಮರಣದಂಡನೆಯೇ ಸೂಕ್ತ ಶಿಕ್ಷೆ ಅಂತ ನ್ಯಾಯಾಧೀಶ ಗೋಲಮ್ ಮೊರ್ಟುಜಾ ಮೊಜುಂದರ್ ಹೇಳಿದ್ದಾರೆ.

ತೀರ್ಪಿನ ನಂತರ ಮಾತನಾಡಿದ ಶೇಖ್ ಹಸೀನಾ, ತನಗೆ ವಿಧಿಸಿದ ಶಿಕ್ಷೆಯನ್ನು ಖಂಡಿಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನಗೆ ನೀಡಿದ ತೀರ್ಪು ಸುಳ್ಳು ಹಾಗೂ ರಾಜಕೀಯ ಪ್ರೇರಿತ. ಪ್ರಜಾಪ್ರಭುತ್ವವಿಲ್ಲದ ಆಯ್ಕೆಯಾಗದ ಸರ್ಕಾರ ನಿರ್ಮಿಸಿದ ನ್ಯಾಯಮಂಡಳಿಯ ತೀರ್ಪು ಇದು ಎಂದಿದ್ದಾರೆ.

ಅವರು ತೀರ್ಪು ನೀಡಲಿ. ನನಗೆ ಚಿಂತೆಯಿಲ್ಲ. ಅಲ್ಲಾಹ್ ನನಗೆ ಜೀವ ಕೊಟ್ಟಿದ್ದಾನೆ, ಅಲ್ಲಾಹ್ ಅದನ್ನು ತೆಗೆದುಕೊಳ್ಳುತ್ತಾನೆ. ಅಲ್ಲಿಯವರೆಗೂ ನಾನು ನನ್ನ ದೇಶದ ಜನರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇನೆ. ನಾನು ನನ್ನ ಹೆತ್ತವರನ್ನು, ನನ್ನ ಒಡಹುಟ್ಟಿದವರನ್ನು ಕಳೆದುಕೊಂಡಿದ್ದೇನೆ. ಅವರು ನನ್ನ ಮನೆಯನ್ನು ಸುಟ್ಟುಹಾಕಿದ್ದಾರೆ ಎಂದು ಶೇಖ್ ಹಸೀನಾ ಹೇಳಿದ್ದಾರೆ.

ಹಾಗಾದ್ರೆ ಈಗ ಭಾರತದ ಮುಂದೆ ಇರುವ ಆಯ್ಕೆಗಳೇನು? ಅನ್ನೋದನ್ನ ನೋಡೋದಾದ್ರೆ ಶೇಖ್ ಹಸೀನಾ ಈಗ ಜವಾಬ್ದಾರಿಯಿಂದ ಪಲಾಯನ ಮಾಡಿ ನವದೆಹಲಿಯಲ್ಲಿ ಆಶ್ರಯ ಪಡೆದಿದ್ದಾರೆ. ಮರಣದಂಡನೆ ನೀಡಿರುವುದರಿಂದ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವ ಬೇಡಿಕೆ ಮತ್ತೆ ಬಲ ಪಡೆಯುವ ಸಾಧ್ಯತೆ ಇದೆ. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಅವರನ್ನು ಗಡಿಪಾರು ಮಾಡಲು ಭಾರತದ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ.

ಮುಂದಿನ ಬೆಳವಣಿಗೆ ಏನು? ಢಾಕಾ ಶೀಘ್ರದಲ್ಲೇ ಅಧಿಕೃತ ಹಸ್ತಾಂತರ ವಿನಂತಿ ಸಲ್ಲಿಸುವ ಸಾಧ್ಯತೆ ಇದೆ. ಜಿಲ್ಲಾ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದರೆ ಭಾರತ ತಿರಸ್ಕರಿಸಬೇಕೋ ಅಥವಾ ಒಪ್ಪಿಕೊಳ್ಳಬೇಕೋ ಎಂಬ ದೊಡ್ಡ ರಾಜತಾಂತ್ರಿಕ ನಿರ್ಧಾರ ಎದುರಿಸಬೇಕಾಗುತ್ತದೆ. ಒಟ್ಟಿನಲ್ಲಿ, ಶೇಖ್ ಹಸೀನಾ ಪ್ರಕರಣ ದಕ್ಷಿಣ ಏಷ್ಯಾದ ರಾಜಕೀಯ ಮತ್ತು ಭಾರತ–ಬಾಂಗ್ಲಾದೇಶ ಸಂಬಂಧಗಳ ಮೇಲೆ ಹೊಸ ಅನಿಶ್ಚಿತತೆ ಮೂಡಿಸಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss