ಬಂಜಾರ ಕಲಾ ಮೇಳ ಸಂಭ್ರಮ, 65 ತಂಡಗಳ ಭರ್ಜರಿ ಪ್ರದರ್ಶನ!

ಕೊಪ್ಪಳ ನಗರದಲ್ಲಿ ಬಂಜಾರ ಸಮುದಾಯದ ಬಹುಮುಖಿ ಕಲಾ ಮೇಳ ಅದ್ದೂರಿಯಾಗಿ ಜರುಗಿದೆ. ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು–ಕೊಪ್ಪಳ ವಲಯದ ಸಹಯೋಗದಲ್ಲಿ ವಿಭಾಗ ಮಟ್ಟದ ಬಂಜಾರ ಬಹುಮುಖಿ ಕಲಾ ಪ್ರತಿಭಾನ್ವೇಷಣಾ ಮೇಳವನ್ನು ನಗರದ ಶಹಾದಿ ಮಹಲ್‌ನಲ್ಲಿ ಆಯೋಜಿಸಲಾಗಿತ್ತು.

ಈ ಕಲಾ ಮೇಳಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಬಂಜಾರ ಸಮುದಾಯದ ಪುರುಷ ಹಾಗೂ ಮಹಿಳಾ ಕಲಾ ತಂಡಗಳು ಭಾಗವಹಿಸಿದ್ದು, ಸುಮಾರು 65 ತಂಡಗಳು 13 ವಿವಿಧ ಕಲಾ ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿವೆ. ಬಂಜಾರ ಸಮುದಾಯದ ವಿಶಿಷ್ಟ ಉಡುಗೆ–ತೊಡುಗೆಗಳನ್ನು ಧರಿಸಿ ನೂರಾರು ಮಹಿಳಾ ಕಲಾವಿದರು ಹಾಗೂ ಪುರುಷ ಕಲಾವಿದರು ಮೆರವಣಿಗೆಯಂತೆ ವೇದಿಕೆಗೆ ಆಗಮಿಸಿ ಕಲಾ ಪ್ರದರ್ಶನ ನೀಡಿದರು.

ವಿಶೇಷವಾಗಿ ಲಂಬಾಣಿ ಯುವತಿಯರ ವಿಶಿಷ್ಟ ಶೈಲಿಯ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು. ಕೊಪ್ಪಳ ವಲಯದ ಜೊತೆಗೆ ದಾವಣಗೆರೆ, ತುಮಕೂರು ಹಾಗೂ ಕಲಬುರ್ಗಿ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ 2018ರಿಂದ ಪ್ರತಿ ವರ್ಷವೂ ಈ ವಿಭಾಗ ಮಟ್ಟದ ಬಂಜಾರ ಕಲಾ ಮೇಳವನ್ನು ಆಯೋಜಿಸಲಾಗುತ್ತಿದೆ.

ಬಂಜಾರ ಸಮುದಾಯದ ಕಲೆ, ಭಾಷೆ, ಸಂಸ್ಕೃತಿ ಹಾಗೂ ಆಚಾರ–ವಿಚಾರಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಲಾ ಮೇಳವನ್ನು ನಡೆಸಲಾಗುತ್ತಿದೆ. ಕಲಾ ಮೇಳದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದ ಪ್ರತಿಯೊಬ್ಬ ಕಲಾವಿದರಿಗೂ ಅಭಿನಂದನಾ ಪತ್ರ ವಿತರಿಸಿ ಗೌರವಿಸಲಾಯಿತು.

About The Author