ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವುದನ್ನು ಬಿಜೆಪಿ ವಿರೋಧಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇದು ರಾಜಕೀಯ ದುರುದ್ದೇಶದಿಂದ ಮಾಡಿದ ವಿರೋಧ, ಸರ್ಕಾರವೂ ರಾಜಕೀಯವಾಗಿಯೇ ಉತ್ತರ ನೀಡಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಅವರು ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಸ್ಥಾನ ಹೊಂದಿದ್ದಾರೆ. ಬಾನು ಮುಷ್ತಾಕ್ ಅವರ ಕೃತಿ ಅನುವಾದಕ್ಕೆ ಬುಕರ್ ಪ್ರಶಸ್ತಿ ದೊರೆತಿದ್ದು, ಅದಕ್ಕಾಗಿ ಸರ್ಕಾರವು ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಘಸ್ತಿಯನ್ನು ಗೌರವಿಸಿದೆ. ಅವರು ಕನ್ನಡ ಸಾಹಿತ್ಯದ ಪ್ರತಿನಿಧಿ. ಆದ್ದರಿಂದಲೇ ದಸರಾ ಉದ್ಘಾಟನೆ ಮಾಡುವ ಗೌರವ ಅವರಿಗೆ ನೀಡಲಾಗಿದೆ ಎಂದರು.
ಮಾಜಿ ಸಂಸದ ಪ್ರತಾಪ ಸಿಂಹ ಕೋರ್ಟ್‌ಗೆ ತೆರಳಿರುವ ಕುರಿತು ಸಿಎಂ ಪ್ರತಿಕ್ರಿಯಿಸಿ, “ನಿಸಾರ್ ಅಹಮ್ಮದ ಇದ್ದಾಗ ಯಾಕೆ ಕೋರ್ಟ್‌ಗೆ ಹೋಗಲಿಲ್ಲ? ಹೈದರಾಲಿ ಟಿಪ್ಪು, ಮಿರ್ಜಾ ಇಸ್ಮಾಯಿಲ್ ಮೆರವಣಿಗೆ ಮಾಡಿದಾಗ ಯಾಕೆ ವಿರೋಧಿಸಲಿಲ್ಲ? ಈಗ ಮಾತ್ರ ವಿರೋಧಿಸುತ್ತಿರುವುದು ಸಂಪೂರ್ಣ ರಾಜಕೀಯ ಎಂದು ಆರೋಪಿಸಿದರು.
ಸ್ಥಳೀಯ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಯ ಕುರಿತಂತೆ ಮಾತನಾಡಿದ ಅವರು, ನಮ್ಮ ಅನುಭವದ ಮೇಲೆ ನೋಡಿದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಸೂಕ್ತ. ಹಲವಾರು ದೇಶಗಳು ಇವಿಎಂ ಬಳಸಿ ಮತ್ತೆ ಬ್ಯಾಲೆಟ್‌ಗೆ ಹಿಂತಿರುಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆಲಮಟ್ಟಿ ಜಲಾಶಯದಲ್ಲಿ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಿದ ಬಳಿಕ ಅವರು ಮಾತನಾಡಿ, ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಆಲಮಟ್ಟಿ ಸೇರಿದಂತೆ ಕಬಿನಿ, ಕಾವೇರಿ, ಹೇಮಾವತಿ ಜಲಾಶಯಗಳು ತುಂಬಿಕೊಂಡಿವೆ. ರೈತರು ಸಂತೋಷದಲ್ಲಿದ್ದಾರೆ, ರೈತರು ಖುಷಿಯಾಗಿರುವುದರಿಂದ ಸರ್ಕಾರವೂ ಖುಷಿಯಾಗಿದೆ ಎಂದು ಹೇಳಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ