ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ, ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. ಇದರಿಂದ ಬಾನು ಮುಷ್ತಾಕ್ ಅವರ ಭಾಗವಹಿಸುವಿಕೆಗೆ ಸಂಬಂಧಿಸಿದ ಕಾನೂನು ತೊಡಕುಗಳೆಲ್ಲವೂ ಬಹುತೇಕ ನಿವಾರಣೆಯಾಗಿವೆ. ಇದಕ್ಕೂ ಮೊದಲು ಹೈಕೋರ್ಟ್ ಕೂಡ ಇದೇ ಅರ್ಜಿಯನ್ನು ವಜಾ ಮಾಡಿದ್ದನ್ನು ಸ್ಮರಿಸಬಹುದು.
ಮೈಸೂರು–ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಪರವಾಗಿ ಗೌರವ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಹಾಗೂ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು. ಪ್ರಾರಂಭದಲ್ಲೇ ಅರ್ಜಿಯನ್ನು ವಜಾಗೊಳಿಸಿದ ಪೀಠ, ಈ ವಿಚಾರಣೆಗೆ ಹೆಚ್ಚಿನ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿತು.
ಒಂದು ಹಂತದಲ್ಲಿ ಅರ್ಜಿದಾರರ ವಾದವನ್ನು ತೀವ್ರವಾಗಿ ಪ್ರಶ್ನಿಸಿದ ನ್ಯಾಯಾಧೀಶರು, ಸಂವಿಧಾನದ ಪ್ರಸ್ತಾವನೆ ಏನು ಹೇಳುತ್ತದೆ? ನಾವು ಜಾತ್ಯತೀತತೆ ಒಪ್ಪಿಕೊಂಡಿರುವಾಗ ಇಂತಹ ಅರ್ಜಿಯನ್ನು ಪರಿಗಣಿಸುವ ಅವಶ್ಯಕತೆ ಎಲ್ಲಿದೆ? ಎಂದು ಪ್ರಶ್ನಿಸಿದರು. ತುರ್ತು ವಿಚಾರಣೆಗೆ ಸೇರಿಸಬೇಕೆಂಬ ಮನವಿಗೂ ಪೀಠ ಆಶ್ಚರ್ಯ ವ್ಯಕ್ತಪಡಿಸಿತು. ಇದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೇ? ಅಷ್ಟೊಂದು ತುರ್ತಿನ ಅಗತ್ಯವೇನು? ಎಂದು ಕೂಡ ಪ್ರಶ್ನಿಸಲಾಯಿತು.
ಅರ್ಜಿದಾರ ಪರ ವಕೀಲರು ದಸರಾ ಧಾರ್ಮಿಕ ಹಬ್ಬ, ಇದುವರೆಗೆ ಹಿಂದೂ ಧರ್ಮೀಯರೇ ಉದ್ಘಾಟನೆ ಮಾಡಿದರು ಎಂದು ಸಮರ್ಥಿಸಲು ಮುಂದಾದಾಗ, ನ್ಯಾಯಾಧೀಶರು ಕಟುವಾಗಿ ಪ್ರತಿಕ್ರಿಯಿಸಿ, ನೀವು ಸಂವಿಧಾನದ ಪ್ರಸ್ತಾವನೆಯನ್ನು ಓದಿದ್ದೀರಾ? ನಿಮಗೆ ಅದು ಅರ್ಥವಾಗದಂತೆ ಕಾಣುತ್ತಿದೆ. ನಾವು ಅದನ್ನು ವಿವರಿಸಬೇಕೆ? ಈ ಅರ್ಜಿಯನ್ನು ಯಾವ ಆಧಾರದ ಮೇಲೆ ಸಲ್ಲಿಸಿದ್ದೀರಿ? ಎಂದು ಪ್ರತಿಪ್ರಶ್ನೆಗಳನ್ನು ಕೇಳಿದರು.
ಅಂತಿಮವಾಗಿ, ಇದು ವಿಚಾರಣೆಗೆ ಯೋಗ್ಯವಲ್ಲಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಲಾಯಿತು. ಇದೇ ದಸರಾ ಹಬ್ಬವನ್ನು ಮುಂಚೆ ಸಾಹಿತಿ ನಿಸಾರ್ ಅಹಮದ್ ಉದ್ಘಾಟಿಸಿದ್ದುದನ್ನು ನೆನಪಿಸಿಕೊಂಡ ನ್ಯಾಯಾಧೀಶರು, ಆಗ ಇಲ್ಲದವಿರೋಧ ಈಗೇಕೆ? ಧರ್ಮದ ಆಧಾರದ ಮೇಲೆ ನಾವು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ