ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣವನ್ನು ವಿರೋಧಿಸಿ ಸೆ.17ರಂದು ಬಿಜೆಪಿ ಕೂಡಲ ಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಿದೆ. ಶಾಸಕರಾದ ಯತ್ನಾಳ್, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ ಹಾಗೂ ಕುಮಾರ್ ಬಂಗಾರಪ್ಪ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಸೆ.17ರಿಂದ ಪಾದಯಾತ್ರೆಗೆ ನಿರ್ಧರಿಸಿದ್ದೇವೆ. ನಮ್ಮ ಪಾದಯಾತ್ರೆಗೆ ಹೈಕಮಾಂಡ್ ಅನುಮತಿ ಕೊಡುತ್ತದೆ. ವರಿಷ್ಠರ ಅನುಮತಿಯೊಂದಿಗೇ ನಾವು ನಡೆಸುತ್ತೇವೆ. ನಮ್ಮ ಪಾದಯಾತ್ರೆ ನಾಯಕತ್ವ ಪ್ರದರ್ಶನವಲ್ಲ ಎಂದಿದ್ದಾರೆ.
ಯಾರನ್ನೋ ಓಲೈಸಲು ಅಥವಾ ಮೆಚ್ಚಿಸಲು ನಾನು ರಾಜಕಾರಣ ಮಾಡುವುದಿಲ್ಲ. ಯಾರ ಮನೆಯ ಬಾಗಿಲನ್ನೂ ತಟ್ಟುವುದಿಲ್ಲ. ನನಗೆ ಟಿಕೆಟ್ ಕೊಟ್ಟಿದ್ದು ಬಿಜೆಪಿ ಅಲ್ಲ. ಆರ್‌ಎಸ್‌ಎಸ್ ನೀಡಿತ್ತು. ಕ್ಷೇತ್ರ, ಜಾತಿಯಿಂದಾಚೆ ಜನಪ್ರಿಯತೆಯುಳ್ಳ ಯತ್ನಾಳ್ ಅಂಥವರಲ್ಲಿ ನಾನೂ ಒಬ್ಬ ಎಂದು ಸಿಂಹ ಹೇಳಿದರು.