ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಇತ್ತೀಚಿನ ‘ಇಸ್ಲಾಂ ಧರ್ಮ ಶ್ರೇಷ್ಠ’ ಎಂಬ ಹೇಳಿಕೆ ಮತ್ತು ಅದರ ನಂತರ ಬಂದ ಟೀಕೆಯ ಮಾತುಗಳು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದವು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ‘ಹಿಂದೂ ಧರ್ಮದ ಕುರಿತು ತಾವು ಅರಿತಿರುವಷ್ಟು ಬೇರೆ ಯಾರಿಗೂ ತಿಳಿದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ‘ಈ ವಿಷಯವಾಗಿ ಬಹಿರಂಗ ಚರ್ಚೆಗೆ ಬರುವಂತೆ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ.
ಎಸ್ ‘ಕೊಪ್ಪಳದಲ್ಲಿ ನಡೆದ ಸಭೆಯೊಂದರ ಬಳಿಕ ಮಾತನಾಡಿದ ಬಸವರಾಜ ರಾಯರೆಡ್ಡಿ, ತಾವೆಂದೂ ಯಾವ ಧರ್ಮವನ್ನೂ ನಿಂದಿಸಿಲ್ಲ ಮತ್ತು ಮುಂದೆಯೂ ನಿಂದಿಸುವುದಿಲ್ಲ, ಹಿಂದೂ ಧರ್ಮದ ಉಪನಿಷತ್ತುಗಳು ಹಾಗೂ ತತ್ವಗಳ ಬಗ್ಗೆ ನನಗೂ ಸಂಪೂರ್ಣ ಅರಿವಿದೆ, ಧರ್ಮದ ಚರ್ಚೆಗೆ ಯಾರಿಗೆ ಧೈರ್ಯವಿದೆಯೋ ಅವರು ತಮ್ಮೊಂದಿಗೆ ನೇರವಾಗಿ ಚರ್ಚೆಗೆ ಬರಲಿ ಎಂದು ಸವಾಲು ಎಸೆದಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ತಮ್ಮ ಹೇಳಿಕೆಯನ್ನು ಟೀಕಿಸಿದ್ದಕ್ಕೆ ರಾಯರೆಡ್ಡಿ ಈ ರೀತಿ ತಿರುಗೇಟು ನೀಡಿದ್ದಾರೆ ಎನ್ನಲಾಗ್ತಿದೆ.
ಆದರೆ, ಇಸ್ಲಾಂ ಧರ್ಮವೇ ಶ್ರೇಷ್ಠ ಎಂಬರ್ಥದಲ್ಲಿ ಈ ಹಿಂದೆ ಬಂದಿದ್ದ ಹೇಳಿಕೆಗಳು ಸಾಕಷ್ಟು ವಿವಾದ ಸೃಷ್ಟಿಸಿದ್ದವು. ಎಲ್ಲಾ ಧರ್ಮಗಳ ಸಾರವೂ ಒಂದೇ, ಅದು ಶಾಂತಿ ಮತ್ತು ಭಕ್ತಿಯಾಗಿದೆ. ಹೀಗಿರುವಾಗ ಯಾವ ಧರ್ಮ ದೊಡ್ಡದು, ಯಾವ ಧರ್ಮ ಚಿಕ್ಕದು ಎಂದು ಹೋಲಿಕೆ ಮಾಡುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಇಷ್ಟೆಲ್ಲಾ ವಿವಾದಗಳು ಹಾಗೂ ರಾಜಕೀಯ ಮಾತಿನ ಚಕಮಕಿಗಳ ಬೆನ್ನಲ್ಲೇ, ರಾಯರೆಡ್ಡಿ ಈಗ ಸದ್ದಿಲ್ಲದೆ ತಮ್ಮ ‘ಟೆಂಪಲ್ ರನ್’ ಅಂದರೆ ದೇವಸ್ಥಾನಗಳ ಭೇಟಿಯನ್ನು ಆರಂಭಿಸಿದ್ದಾರೆ.
ಇದು ಕೇವಲ ಧಾರ್ಮಿಕ ನಂಬಿಕೆಯಾ ಅಥವಾ ವಿವಾದದ ಪ್ರಾಯಶ್ಚಿತ್ತ ಯಾತ್ರೆಯಾ ಎಂಬ ಚರ್ಚೆಗಳು ಮತ್ತೊಂದು ಕಡೆ ಶುರುವಾಗಿವೆ. ಅದರಲ್ಲೂ ಯಲಬುರ್ಗಾ ತಾಲೂಕಿನ ಕಲ್ಲೂರಿನ ಪ್ರಸಿದ್ಧ ಕಲ್ಲಿನಾಥೇಶ್ವರ ದೇವಸ್ಥಾನಕ್ಕೆ ಬಸವರಾಜ ರಾಯರೆಡ್ಡಿ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ಈಗ ಎಲ್ಲರ ಗಮನ ಸೆಳೆದಿದೆ. ಅನುಭವಿ ರಾಜಕಾರಣಿಯಾಗಿರುವ ರಾಯರೆಡ್ಡಿ ಅವರ ಈ ದೇವಸ್ಥಾನಗಳ ಭೇಟಿ ಮತ್ತು ಬಹಿರಂಗ ಸವಾಲುಗಳು ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಸಂಚಲನ ಮೂಡಿಸುವುದಂತೂ ಖಂಡಿತ.




