ಬೀದಿ ನಾಯಿಗಳಿಗೆ ವಿಶೇಷವಾಗಿ ತಯಾರಿಸಿದ ಭಕ್ಷ್ಯ ನೀಡುತ್ತಿಲ್ಲ. ಇದು ಮಾನವ ದರ್ಜೆಯ ಆಹಾರವಲ್ಲ, ಇದು ನಾಯಿ ದರ್ಜೆಯ ಆಹಾರ ಎಂದು ಬಿಬಿಎಂಪಿ ಸ್ಪಷ್ಟನೆ ನೀಡಿದೆ. ಬೀದಿನಾಯಿಗಳಿಗೆ ಚಿಕನ್ ರೈಸ್ ಭಾಗ್ಯದ ಕುರಿತು ಅನಿಮಲ್ ಹಸ್ಬೆಂಡ್ರಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ. ಈ ಊಟಕ್ಕೆ ಹೆಸರಿಲ್ಲ. ಮಾನವ ಗುಣಮಟ್ಟದ ಆಹಾರವನ್ನು ಬೀದಿ ನಾಯಿಗಳಿಗೆ ನೀಡುವುದಿಲ್ಲ. ನಾಯಿ ದರ್ಜೆಯ ಆಹಾರ ನೀಡಲಾಗುವುದು. ಟೆಂಡರ್‌ನಲ್ಲಿ ಊಟದ ಪದಾರ್ಥಗಳನ್ನು ನಮೂದಿಸಿದ್ದು ಬಿಟ್ಟರೇ ವಿತರಿಸುವ ಆಹಾರಕ್ಕೆ ಹೆಸರಿಟ್ಟಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.
ಕೋಳಿ ಮಾಂಸದ ತ್ಯಾಜ್ಯವನ್ನು ಬಳಸಿ ಆಹಾರ ಸಿದ್ಧಪಡಿಸಿ ಬೀದಿ ನಾಯಿಗಳಿಗೆ ನೀಡಲಾಗುವುದು. ಅದಕ್ಕಾಗಿ ಕೋಳಿಯನ್ನು ಕೊಂದು ಹಾಕುವುದಿಲ್ಲ. ಟೆಂಡರ್‌ನಲ್ಲಿ ಬೀದಿ ನಾಯಿಗಳಿಗೆ ತಯಾರಿಸುವ ಆಹಾರದ ಪದಾರ್ಥವನ್ನು ಮಾತ್ರ ನಮೂದಿಸಲಾಗಿತ್ತು. ಚಿಕನ್ ರೈಸ್, ಚಿಕನ್ ಬಿರಿಯಾನಿ ಎಂದು ನಮೂದಿಸಿಲ್ಲ. ಸಸ್ಯಾಹಾರವನ್ನು ಬೀದಿ ನಾಯಿಗಳು ತಿನ್ನುವುದಿಲ್ಲ. ಹಾಗಾಗಿ, ಮಾಂಸಾಹಾರ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರದ ಕೆಲವು ಕಡೆ ಬೀದಿ ನಾಯಿಗಳ ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ, ಆ್ಯಂಟಿರೇಬಿಸ್ ಲಸಿಕೆಹಾಕುವುದು ಕಷ್ಟವಾಗಿದೆ. ಆಹಾರ ವಿತರಣೆಯಿಂದ ಆ ನಾಯಿಗಳನ್ನು ಹಿಡಿದು ಎಬಿಸಿ ಹಾಗೂ ಎಆರ್‌ವಿಗೆ ಸಹಕಾರಿಯಾಗಲಿದೆ. ಬೀದಿ ನಾಯಿಗಳಿಗೆ ಆಹಾರ ದೊರೆಯುವುದರಿಂದ ನಾಯಿಗಳ ಆಕ್ರಮಣಶೀಲತೆ ಕಡಿಮೆಯಾಗಲಿದೆ. ಸಾರ್ವಜನಿಕರಿಗೆ ಹತ್ತಿರವಾಗಲಿವೆ. ಬೀದಿ ನಾಯಿ ನಿಯಂತ್ರಣ ಕಾರ್ಯಕ್ರಮಕ್ಕೆ ಸಹಕಾರಿಯಾಗಲಿದೆ ಅಗತ್ಯವಿರುವ ಕಡೆ ಮಾತ್ರ ಆಹಾರ ವಿತರಣೆ ಮಾಡಲಾಗುವುದು. ಪ್ರತಿ ಒಂದು ನಾಯಿಗೆ ದಿನದ ಆಹಾರಕ್ಕೆ 11 ರೂ. ವೆಚ್ಚ ಮಾಡಲಾಗುತ್ತಿದೆ. ಆಹಾರ ಸಾಗಾಣಿಕೆ ವೆಚ್ಚ, ಸ್ವಚ್ಛತೆ, ಜಿಎಸ್‌ಟಿ ಸೇರಿದಂತೆ ಒಟ್ಟು ವೆಚ್ಚ 22.42 ರೂ. ಆಗಲಿದೆ. ಭಾರತ ಪ್ರಾಣಿ ಕಲ್ಯಾಣ ಮಂಡಳಿಯ ಕೈಪಿಡಿ, ಸಂಶೋಧನೆಯ ಶಿಫಾರಸು ಆಧಾರಿಸಿ ಆಹಾರ ವಿತರಣೆ ಯೋಜನೆ ರೂಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ