ಬೆಂಗಳೂರು: ಬಿಬಿಎಂಪಿ ಚುನಾವಣೆಯ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಜೆಡಿಎಸ್ ಸ್ವಾಗತ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ನಗರದ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿಂದು ಮಳೆಪೀಡಿತ ಪ್ರದೇಶಗಳಿಗೆ ಭೇಟಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಅವಧಿ ಮುಗಿದರೂ ಕಳೆದ ಎರಡು ವರ್ಷಗಳಿಂದ ಬಿಜೆಪಿ ಸರಕಾರವು ಪಾಲಿಕೆ ಚುನಾವಣೆ ಮಾಡಿರಲಿಲ್ಲ. ಹೇಗಾದರೂ ಮಾಡಿ ಚುನಾವಣೆಯನ್ನು ಮುಂದಕ್ಕೆ ಹಾಕಿಕೊಂಡೇ ಬರುತ್ತಿತ್ತು. ಈಗ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಸರಕಾರ ಯಾವುದೇ ಸಬೂಬು ಹೇಳದೇ ಚುನಾವಣೆ ನಡೆಸಲೇಬೇಕು. 8 ವಾರದಲ್ಲಿ ಮೀಸಲಾತಿ ಪ್ರಕ್ರಿಯೆ ಮುಗಿಸಿ ಚುನಾವಣೆ ನಡೆಸಬೇಕು. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಚುನಾವಣೆ ಮಾಡಬೇಕು ಎಂದು ಅವರು ಹೇಳಿದರು.
ನಾವು ಚುನಾವಣೆಗೆ ಸಿದ್ದವಾಗಿಯೇ ಇದ್ದೇವೆ. ರಾಜ್ಯ ಸರಕಾರ, ಕಾಂಗ್ರೆಸ್ ಸರಕಾರದ ಆಡಳಿತ, ಬಿಜೆಪಿ ಸರಕಾರದ ಆಡಳಿತವನ್ನು ಜನರು ನೋಡಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನರಿಗೆ ತೀವ್ರ ಆಕ್ರೋಶ ಇದೆ. ನಮ್ಮ ಪಕ್ಷ ಜನರಿಗೆ ತಿಳಿವಳಿಕೆ ಮೂಡಿಸಲು ಕೆಲಸ ಮಾಡುತ್ತೇವೆ. ತಕ್ಷಣವೇ ಚುನಾವಣೆ ನಡೆದರೂ ನಮ್ಮ ಪಕ್ಷ ತಯಾರಿದೆ. ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್ ಮತ್ತು ಬಿಜೆಪಿಯಷ್ಟೇ ಸಮಾನವಾಗಿ ಸ್ಥಾನ ಪಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಪಸಿದರು.
ಎರಡು ದಿನದಲ್ಲಿ ರಾಜ್ಯಸಭೆ, ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ:
ಎರಡು-ಮೂರು ದಿನಗಳಲ್ಲಿ ಜೆಡಿಎಸ್ ಪಕ್ಷವು ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ. ನಮ್ಮ ಹೈಕಮಾಂಡ್ ದೆಹಲಿಯಲ್ಲಿ ಇಲ್ಲ. ನಮ್ಮ ಹೈಕಮಾಂಡ್ ಇಲ್ಲೇ ಇದೆ. ನಾವು ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ. ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ವರಿಷ್ಠರ ಜತೆ ಚರ್ಚೆ ಮಾಡಿ ಅಂತಿಮವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಎಲ್ಲ ಭಾಷೆಗಳನ್ನು ಮೋದಿ ಗೌರವಿಸಲಿ:
ಎಲ್ಲಾ ಸ್ಥಳೀಯ ಭಾಷೆಗಳಿಗೆ ಗೌರವ ನೀಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು; ಭಾಷೆಗಳ ವಿಚಾರದಲ್ಲಿ ಕೇಂದ್ರ ಸರಕಾರ ದ್ವಿಮುಖ ನೀತಿಯ ನಿಲುವು ತೋರಿಸುತ್ತದೆ. ಮೋದಿ ಅವರು ಸ್ಥಳೀಯ ಭಾಷೆಗಳನ್ನು ಗೌರವಿಸಬೇಕು ಅಂತಾರೆ. ಆದರೆ, ಗೃಹ ಸಚಿವ ಅಮಿತ್ ಶಾ ಅವರು ಹಿಂದಿ ರಾಷ್ಟ್ರಭಾಷೆ ಆಗಬೇಕು ಅಂತಾರೆ. ಯಾರನ್ನು ನಂಬುವುದು ಎಂದು ಪ್ರಶ್ನಿಸಿದರು.
ನೀನು ಹೊಡೆದ ಹಾಗೆ ಮಾಡು, ನಾನು ಅತ್ತ ಹಾಗೆ ಮಾಡ್ತೀನಿ ಎಂಬಂತೆ ಮೋದಿ-ಅಮಿತ್ ಶಾ ವರ್ತನೆ ಇದೆ. ಸ್ಥಳೀಯ ಭಾಷೆಗಳನ್ನು ಸರ್ವನಾಶ ಮಾಡುವ ಹುನ್ನಾರ ನಡೆಯುತ್ತಿದೆ. ಮೊದಲು ಮೋದಿ ಅವರು ಪ್ರಾದೇಶಿಕ ಭಾಷೆಗಳನ್ನು ಗೌರವಿಸಲಿ ಎಂದು ಅವರು ಟೀಕಿಸಿದರು.




