‘ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್’ಗೆ ಬಿಬಿಎಂಪಿಯಿಂ ಗುರುತಿನ ಚೀಟಿ ವಿತರಣೆ

ಬೆಂಗಳೂರು: ಭಾರತ ಸರ್ಕಾರದ ಸೂಚನೆಯಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳನ್ನು ಗುರುತಿಸಿ ಗುರುತಿನ ಚೀಟಿ ವಿತರಿಸಲಾಗುತ್ತಿದ್ದು, ಇಂದು ಮಾನ್ಯ ಮುಖ್ಯ ಆಯುಕ್ತರಾದ ಗೌರವ್ ಗುಪ್ತ ರವರು ಸಾಂಕೇತಿಕವಾಗಿ 8 ಮಂದಿಗೆ ಗುರುತಿನ ಚೀಟಿ ವಿತರಣೆ ಮಾಡಿದರು.

ಈ ಹಿಂದೆ ಮಲಹೊರುವ ಪದ್ಧತಿ ರೂಢಿಯಲ್ಲಿದ್ದು, ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಕಾಯ್ದೆ ಹಾಗೂ ನಿಯಮಗಳು ಜಾರಿಗೆತಂದಿತ್ತು. ಅದರ ಪ್ರಕಾರ 2013ನೇ ಸಾಲಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದ 201 ಜನರನ್ನು ಸಮೀಕ್ಷೆಯ ಮುಖಾಂತರ ಗುರುತಿಸಲಾಗಿದ್ದು, ಸದರಿಯವರ ಕುಟುಂಬ ಅವಲಂಬಿತರಿಗೆ ಪಾಲಿಕೆಯು ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ವೃತ್ತಿಯಿಂದ ಸಮಾಜ ಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನ ನಡೆಸಲು ಅನುಕೂಲಕರ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

2013ರಲ್ಲಿ ಗುರುತಿಸಲ್ಪಟ್ಟಿರುವ 201 ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳಿಗೆ ಭಾರತ ಸರ್ಕಾರದಿಂದ One time Cash Assistance(OTCA) ಆಗಿ ರೂ. 40,000/-ಗಳನ್ನು 185 ಸಫಾಯಿ ಕರ್ಮಚಾರಿಗಳಿಗೆ ಈಗಾಗಲೇ ಡಿ.ಬಿ.ಟಿ ಮುಖಾಂತರ ನೇರ ಪಾವತಿ ಮಾಡಿ ಪ್ರೋತ್ಸಾಹಿಸಲಾಗುತ್ತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 2013ರಲ್ಲಿ ಗುರುತಿಸಿರುವ 201 ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳಿಗೆ ಗುರುತಿನ ಚೀಟಿಗಳನ್ನು ಸಿದ್ಧಪಡಿಸಿ ವಿತರಿಸಲಾಗುತ್ತಿದೆ. ಸದರಿ ಗುರುತಿನ ಚೀಟಿಗಳ ಆಧಾರದ ಮೇಲೆ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳಿಗೆ ಭಾರತ ಸರ್ಕಾರ, ರಾಜ್ಯ ಸರ್ಕಾರ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಹಾಗೂ ಬಿಬಿಎಂಪಿ ವತಿಯಿಂದ ಪುನರ್ವಸತಿ ಸೌಲಭ್ಯಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ವಲಯಗಳಲ್ಲಿ ಜಂಟಿ ಆಯುಕ್ತರ ಮುಖಾಂತರ ಗುರುತಿನಚೀಟಿ ವಿತರಿಸಲಾಗುತ್ತಿದೆ.

2018-19ನೇ ಸಾಲಿನಲ್ಲಿ ಸಂಘ ಸಂಸ್ಥೆಗಳು/ಇನ್ನಿತರೇ ಸಂಘಗಳಿಂದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳು ಗುರುತಿಸದೇ ಬಿಟ್ಟು ಹೋಗಿರುವುದು ತಿಳಿದು ಬಂದಿರುತ್ತದೆ. ಈ ಪೈಕಿ ಪುನಃ ಸರ್ವೆ ನಡೆಸಿ 1424 ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳನ್ನು ಗುರುತಿಸಿ ಭಾರತ ಸರ್ಕಾರದ ಸ್ವಚ್ಛತಾ ಅಭಿಯಾನ ಮೊಬೈಲ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಅನುಮೋದನೆಗೊಂಡ ನಂತರ ಸೌಲಭ್ಯಗಳನ್ನು ಕಲ್ಪಿಸಲಾಗುವುದು.

2018-19ನೇ ಸಾಲಿನಲ್ಲಿ ಮರು ಸಮೀಕ್ಷೆ ಮುಖಾಂತರ ಗುರುತಿಸಲ್ಪಟ್ಟಿರುವ 1424 ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳಿಗೆ ಸಹ ನಿಯಮಾನುಸಾರ ಸೌಲಭ್ಯ ಪಡೆಯಲು ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಗುರುತಿನಚೀಟಿ ಪಡೆದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳು ಪಾಲಿಕೆಯ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳಡಿಯಲ್ಲಿ ವಿದ್ಯಾರ್ಥಿ ಶುಲ್ಕ ಮರುಪಾವತಿ, ಒಂಟಿ ಮನೆ ಸೌಲಭ್ಯ, ಕೌಶಲ್ಯತರಬೇತಿ, ಸ್ವಯಂಉದ್ಯೋಗ ಸೇರಿದಂತೆ ಇನ್ನಿತರೆ ಕಲ್ಯಾಣ ಕಾರ್ಯಕ್ರಮದ ಸೌಲಭ್ಯಗಳನ್ನು ಆದ್ಯತೆ ಮೇಲೆ ಪಡೆಯಲು ಅರ್ಹರಾಗಿರುತ್ತಾರೆ. ಸೌಲಭ್ಯಗಳನ್ನು ಪಡೆಯುವುದರ ಮೂಲಕ ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಸಮಾಜದಲ್ಲಿ ಗೌರವಯುತವಾದ ಬದುಕನ್ನು ಕಟ್ಟಿಕೊಳ್ಳಬೇಕೆಂಬುದು ಪಾಲಿಕೆಯ ಆಶಯವಾಗಿದೆ. ಇದನ್ನು ಈಡೇರಿಸುವ ನಿಟ್ಟಿನಲ್ಲಿ ಪಾಲಿಕೆಯು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

ಇಂದು ದಿನಾಂಕ:21-04-2022ರಂದು ಸಾಂಕೇತಿಕವಾಗಿ 1) ಮುನಿಕೆಂಚಪ್ಪ, 2) ಕೃಷ್ಣಪ್ಪ 3) ಮುನಿಸ್ವಾಮಪ್ಪ 4) ಮಹಾಲಕ್ಷ್ಮಯ್ಯ 5) ಅಯ್ಯಣ್ಣ 6) ಹನುಮಂತಪ್ಪ 7) ವೆಂಕಟರಮಣ ಮತ್ತು 8) ನರಸಿಂಹ ರವರುಗಳಿಗೆ ಗುರುತಿನಚೀಟಿ ವಿತರಿಸಲಾಯಿತು.

ಈ ವೇಳೆ ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಾದ ಬಿ.ಶರತ್, ಕಲ್ಯಾಣ ವಿಭಾಗದ ಉಪ ಆಯುಕ್ತರಾದ ಮುರಳೀಧರ್, ಕಲ್ಯಾಣ ವಿಭಾಗದ ಸಹಾಯಕ ಆಯುಕ್ತರಾದ ರಾಜೇಶ್ವರಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

About The Author