ಆಗಸ್ಟ್ 27ಕ್ಕೆ ಗಣೇಶ ಹಬ್ಬ ಇದೆ. ಹೀಗಾಗಿ ಬಿಬಿಎಂಪಿ ಹಲವು ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ನಿಯಮ ಉಲ್ಲಂಘನೆ ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ ಅಂತಾ ಎಚ್ಚರಿಕೆ ನೀಡಿದೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಮುಖ್ಯ ಆಯುಕ್ತ ಮಹೇಶ್ವರ ರಾವ್ ಅಧ್ಯಕ್ಷತೆಯಲ್ಲಿ, ತೀರ್ಮಾನ ಕೈಗೊಳ್ಳಲಾಗಿದೆ. ಪರಿಸರ ಸ್ನೇಹಿ ಹಬ್ಬವನ್ನು ಉತ್ತೇಜಿಸುವ ಉದ್ದೇಶದಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಕೆಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಜೊತೆಗೆ, ರಾಸಾಯನಿಕ ಬಣ್ಣಗಳು, ಥರ್ಮಾಕೋಲ್, ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಬಳಸುವವರ ಮೇಲೆ ಕೂಡ ನಿಗಾ ಇಡಲಾಗಿದೆ.
ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಘ-ಸಂಸ್ಥೆಗಳು ಬಿಬಿಎಂಪಿಯ ಉಪ ವಿಭಾಗ ಮಟ್ಟದ ನೋಡಲ್ ಅಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು.
ಅನುಮತಿ ಇಲ್ಲದೆ ಮೂರ್ತಿ ಪ್ರತಿಷ್ಠಾಪಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ನಿಯಮ ಉಲ್ಲಂಘನೆ ಮಾಡಿದರೆ ದಂಡ ಹಾಗೂ ಕ್ರಿಮಿನಲ್ ಪ್ರಕರಣ ದಾಖಲು ಮಾಡೋದಾಗಿ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಮನೆಯಲ್ಲಿಯೇ ಬಕೆಟ್ ನೀರಿನಲ್ಲಿ ಪರಿಸರ ಸ್ನೇಹಿ ಮೂರ್ತಿಗಳನ್ನು ವಿಸರ್ಜಿಸಿ, ಉಳಿದ ಮಣ್ಣನ್ನು ಕೈತೋಟ ಅಥವಾ ಹೂವಿನ ಕುಂಡಗಳಲ್ಲಿ ಉಪಯೋಗಿಸುವಂತೆ ಸಲಹೆ ನೀಡಿದೆ. 2025ರ ಗಣೇಶೋತ್ಸವವು ಪರಿಸರ ಸ್ನೇಹಿಯಾಗಿರುವಂತೆ ವಹಿಸಿಕೊಳ್ಳಬೇಕೆಂಬ ಗುರಿಯೊಂದಿಗೆ ಬಿಬಿಎಂಪಿ ಕ್ರಮ ಕೈಗೊಂಡಿದೆ.
ವರದಿ : ಲಾವಣ್ಯ ಅನಿಗೋಳ