ಬೀದಿನಾಯಿಗಳ ಭೀತಿಗೆ BBMP ‘ಟ್ರೈನರ್’ ಪರಿಹಾರ!

ಬೆಂಗಳೂರಲ್ಲಿ ಬೀದಿನಾಯಿಗಳ ಅಟ್ಟಹಾಸ ಮಿತಿ ಮೀರುತ್ತಿದ್ದರೆ, ಇತ್ತ ಅದಕ್ಕೆ ಬ್ರೇಕ್ ಹಾಕಬೇಕಿದ್ದ ಬಿಬಿಎಂಪಿ ದಿನಕ್ಕೊಂದು ಹೊಸ ಪ್ರಯೋಗ ಮಾಡಲು ಹೊರಟಿರುವುದು ನಗರವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಬೀದಿನಾಯಿಗಳಿಗೆ ಬಾಡೂಟ ಹಾಕಲು ಚಿಂತನೆ ನಡೆಸಿದ್ದ ಪಾಲಿಕೆ, ಇದೀಗ ಬೀದಿನಾಯಿಗಳಿಗೆ ತರಬೇತಿ ಕೊಡಿಸಲು ಸಜ್ಜಾಗುತ್ತಿದೆ.

ಬೀದಿನಾಯಿಗಳ ನಿಯಂತ್ರಣಕ್ಕೆ ಆಹಾರ ಕೊಡುತ್ತೇವೆ ಎಂದಿದ್ದ ಪಾಲಿಕೆ ನಡೆ ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಎಲ್ಲೆಲ್ಲಿ ಬೀದಿನಾಯಿಗಳು ದಾಳಿ ಮಾಡುತ್ತವೆ ಎಂದು ಗಮನಿಸಿ ಅಂಥ ಜಾಗಗಳಲ್ಲಿ ನಿಗಾ ಇಡುವ ಕೆಲಸ ಮಾಡಲು ಉದ್ದೇಶಿಸಿದೆ. ಈ ಯೋಜನೆ ಜಾರಿಗೆ ಟ್ರೈನರ್ಗಳನ್ನು ನೇಮಿಸಿಕೊಳ್ಳಲು ಮುಂದಾಗಿದ್ದು, ಪೊಲೀಸ್ ನಾಯಿಗಳಿಗೆ ತರಬೇತಿ ನೀಡುವ ಟ್ರೈನರ್‌ಗಳನ್ನು ನೇಮಿಸಲು ತಯಾರಿ ನಡೆಸಿದೆ.

ಪ್ರತಿಯೊಬ್ಬ ಟ್ರೈನರ್‌ಗೆ ದಿನಕ್ಕೆ 233 ರೂಪಾಯಿ ನಿಗದಿ ಮಾಡಲು ಪಾಲಿಕೆ ಯೋಜಿಸಿದೆ. ಮತ್ತೊಂದೆಡೆ, ಪ್ರಾಯೋಗಿಕವಾಗಿ ಪರಿಣಾಮಕಾರಿಯಾದ ಯೋಜನೆಗಳನ್ನು ಹಮ್ಮಿಕೊಳ್ಳುವುದು ಬಿಟ್ಟು ಇಲ್ಲಸಲ್ಲದ ಯೋಜನೆಗಳ ಪ್ರಯೋಗಕ್ಕೆ ಹೊರಟ ಪಾಲಿಕೆ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿ ನಾಯಿಗಳನ್ನು ನಿಯಂತ್ರಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬದಲು ದಿನಕ್ಕೊಂದು ಕೆಲಸಕ್ಕೆ ಬಾರದ ಪ್ರಯೋಗ ಚಿಂತನೆ ಮಾಡುತ್ತಿದೆ ಪಾಲಿಕೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಒಂದೆಡೆ ಬೀದಿನಾಯಿಗಳಿಂದ ಆಗುತ್ತಿರುವ ಸಮಸ್ಯೆಗಳು ಪದೇ ಪದೇ ಸದ್ದುಮಾಡುತ್ತಿವೆ. ಇತ್ತ ಸಂತಾನ ಶಕ್ತಿ ಹರಣ ಚಿಕಿತ್ಸೆ, ರೇಬಿಸ್ ಲಸಿಕೆ ಹೆಚ್ಚಳ ಸೇರಿ ಬೇರೆ ಬೇರೆ ಕ್ರಮಗಳನ್ನು ಹೆಚ್ಚಿಸಬೇಕಿದ್ದ ಪಾಲಿಕೆ ಇದೀಗ ದಿನಕ್ಕೊಂದು ಹೊಸ ಪ್ರಯೋಗದ ಬಗ್ಗೆ ಮಾತನಾಡುತ್ತಿದೆ. ಸದ್ಯ ಬೆಂಗಳೂರಿನಲ್ಲಿ ದಿನೇ ದಿನೇ ಬೀದಿನಾಯಿಗಳ ಕಾಟ ಹೆಚ್ಚಾಗುತ್ತಿದ್ದು, ಪಾಲಿಕೆ ಅದೆಷ್ಟರ ಮಟ್ಟಿಗೆ ಬೀದಿನಾಯಿಗಳಿಗೆ ಪಾಠ ಹೇಳಿ ಕಂಟ್ರೋಲ್ ಮಾಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author