ಸಿಲಿಕಾನ್ ಸಿಟಿಯಲ್ಲಿ 75 ಕೋಟಿ ರೂಪಾಯಿ ಮೌಲ್ಯದ ಬಿಡಿಎ ಆಸ್ತಿ ವಶ

ಬೆಂಗಳೂರು: ಅತಿಕ್ರಮಣಕಾರರಿಂದ ತನ್ನ ಆಸ್ತಿಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಗಳವಾರ ಸುಮಾರು 75 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಕ್ಕೆ ತೆಗೆದುಕೊಂಡಿದೆ.

ಬಿಟಿಎಂ ಬಡಾವಣೆಯ 4 ನೇ ಹಂತದ 2 ನೇ ಬ್ಲಾಕ್ ನ ದೇವರಚಿಕ್ಕನಹಳ್ಳಿಯ ಸರ್ವೇ ಸಂಖ್ಯೆ 41 ರಲ್ಲಿ ಶಾಲಾ ಉದ್ದೇಶಕ್ಕಾಗಿ 23 ಗುಂಟೆ ಜಾಗವನ್ನು ಮತ್ತು ಇದೇ ಸರ್ವೇ ಸಂಖ್ಯೆಯಲ್ಲಿನ 36 1/2 ಗುಂಟೆ ಜಾಗವನ್ನು ಬಿಎಂಟಿಸಿ ಬಸ್ ಡಿಪೋಗೆ ಮಂಜೂರು ಮಾಡಲಾಗಿತ್ತು. ಆದರೆ, ಕಳೆದ ಒಂದು ದಶಕದಿಂದ ಖಾಸಗಿ ವ್ಯಕ್ತಿಗಳು ಈ ಎರಡೂ ಜಾಗಗಳನ್ನು ಅತಿಕ್ರಮಿಸಿಕೊಂಡು ಅಲ್ಲಿ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರ ಮಾರ್ಗದರ್ಶನದಲ್ಲಿ ಶಾಲಾ ಉದ್ದೇಶಕ್ಕಾಗಿ ಮೀಸಲಿದ್ದ ಜಾಗವನ್ನು ಬಿಡಿಎ ಕಾರ್ಯಪಾಲಕ ಅಭಿಯಂತರ ಸುರೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಅಶೋಕ್ ಮತ್ತು ಬಿಡಿಎ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ನೇತೃತ್ವದಲ್ಲಿ ಮಂಗಳವಾರ ಜಾಗವನ್ನು 10 ಕ್ಕೂ ಹೆಚ್ಚು ತಾತ್ಕಾಲಿಕ ಶೆಡ್ ಗಳು ಮತ್ತು ಅಂಗಡಿ ಮುಗ್ಗಟ್ಟುಗಳನ್ನು ಆರು ಜೆಸಿಬಿಗಳನ್ನು ಬಳಸಿ ತೆರವುಗೊಳಿಸಲಾಯಿತು.

ಮತ್ತೊಂದೆಡೆ, ಬಿಎಂಟಿಸಿಗೆ ಮಂಜೂರು ಮಾಡಲಾಗಿದ್ದ ಜಾಗದಲ್ಲಿ ಇದ್ದ 10 ಕ್ಕೂ ಹೆಚ್ಚು ತಾತ್ಕಾಲಿಕ ಶೆಡ್ ಗಳು ಮತ್ತು ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸಿ ಸುಮಾರು ಒಂದೂಮುಕ್ಕಾಲು ಎಕರೆ ಜಾಗವನ್ನು ಮರುವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ಎರಡೂ ಜಾಗಗಳ ಒಟ್ಟು ಮೌಲ್ಯ ಸುಮಾರು 75 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಒತ್ತುವರಿ ತೆರವು ಕಾರ್ಯ ಮುಂದುವರಿಕೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು, ವಿಧಾನಮಂಡಲ ಅಧಿವೇಶನ ಮತ್ತು ಇನ್ನಿತರೆ ಕಾರಣಗಳಿಂದಾಗಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈಗ ಕಾರ್ಯಾಚರಣೆಯನ್ನು ಪುನಾರಂಭಿಸಿದ್ದು, ಪ್ರಕ್ರಿಯೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಬಿಡಿಎಗೆ ಸೇರಿದ ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಗುರುತಿಸಿದ್ದು, ಆಸ್ತಿಯನ್ನು ವಶಪಡಿಸಿಕೊಳ್ಳಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ಪ್ರಕ್ರಿಯೆ ನಿರಂತರವಾಗಿ ಸಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

About The Author