ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಯು ಪ್ರಕಟಿಸಿರುವ ಟ್ರೈನಿ ಎಂಜಿನಿಯರ್‌ಗಳ ನೇಮಕಾತಿ ಅಧಿಸೂಚನೆಯಲ್ಲಿ ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಅವಕಾಶ ಕಲ್ಪಿಸದಿರುವುದು ಖಂಡನೀಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ ವ್ಯಕ್ತಪಡಿಸಿದೆ. ಈ ನೇಮಕಾತಿ ಪ್ರಕ್ರಿಯೆ ಮರುಪರಿಶೀಲಿಸಬೇಕು. ಸ್ಥಳೀಯರಿಗೆ ಆದ್ಯತೆ ನೀಡುವಂತೆ ಕೇಂದ್ರ ರಕ್ಷಣಾ ಸಚಿವರಿಗೆ ಪ್ರಾಧಿಕಾರ ಪತ್ರ ಬರೆದಿದೆ.
ಹೌದು ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಬುಧವಾರ ಈ ಕುರಿತಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪತ್ರ ಬರೆದಿದ್ದಾರೆ. BEL ಸಂಸ್ಥೆ ಆರಂಭಿಸಿರುವಂತ ಟ್ರೈನಿ ಎಂಜಿನಿಯರಗಳ ನೇಮಕಾತಿ ಪ್ರಕ್ರಿಯೆಯನ್ನ ಕೇಂದ್ರ ಸರ್ಕಾರ ಮರು ಪರಿಶೀಲಿಸಬೇಕು ಅಂತ ಪ್ರಾಧಿಕಾರ ತಿಳಿಸಿದೆ.
ಬೆಂಗಳೂರು ಪ್ರಧಾನ ಕಚೇರಿಯನ್ನು ಹೊಂದಿರುವ BEL ಸಂಸ್ಥೆ, ಟ್ರೈನಿ ಎಂಜಿನಿಯರ್‌ಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ. ಅದರಲ್ಲಿ ಸ್ಥಳೀಯ ಕನ್ನಡಿಗರಿಗೆ ಯಾವುದೇ ವಿಶೇಷ ಆದ್ಯತೆ ನೀಡದೆ ನಡೆಸಿರುವ ಪ್ರಕ್ರಿಯೆಯನ್ನು ಸಂವಿಧಾನಿಕ ಒಕ್ಕೂಟ ತತ್ತ್ವಗಳಿಗೆ ವಿರುದ್ಧವಾಗಿದೆ ಎಂದು ಪ್ರಾಧಿಕಾರ ಆರೋಪಿಸಿದೆ.
ಈ ನೇಮಕಾತಿ ಅಧಿಸೂಚನೆಯಲ್ಲಿ ಸ್ಥಳೀಯ ಕನ್ನಡಿಗರಿಗೆ ಯಾವ ಅವಕಾಶವೂ ದೊರೆಯದ ರೀತಿಯಲ್ಲಿ ಈ ಅಧಿಸೂಚನೆ ಸಿದ್ಧಪಡಿಸಲಾಗಿದೆ ಎಂದು ದೂರಿದ್ದಾರೆ. BEL ಸಂಸ್ಥೆ ಬೆಳೆದ ಹಿನ್ನೆಲೆಯಲ್ಲಿಯೇ ಕನ್ನಡಿಗರ ಶ್ರಮ, ಕೊಡುಗೆ ಮಹತ್ತರವಾಗಿದೆ. ಇಂತಹ ಸಂಸ್ಥೆಗಳಿಂದ ಕನ್ನಡಿಗರನ್ನು ದೂರವಿಟ್ಟು ನೇಮಕಾತಿ ಮಾಡುವುದು ನ್ಯಾಯಸಮ್ಮತವಲ್ಲ ಎಂದು ಡಾ. ಬಿಳಿಮಲೆ ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇಲಾಖೆಯ ಅಧೀನದಲ್ಲಿರುವ ಎಲ್ಲ ಸಾರ್ವಜನಿಕ ಉದ್ದಿಮೆಗಳಿಗೆ ತಮ್ಮ ನೇಮಕಾತಿ ಪ್ರಕ್ರಿಯೆಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು ಎಂದು ನಿರ್ದೇಶನ ನೀಡಬೇಕು. ಇಂತಹ ಆಶಯ ಸಾಕಾರವಾದಲ್ಲಿ ಮಾತ್ರ ನಿಜವಾದ ನ್ಯಾಯದಾನ ಸಾಧ್ಯ, ಸಾಂವಿಧಾನಿಕ ತತ್ತ್ವಗಳಿಗೆ ಗೌರವ ದೊರಕಲು ಸಾಧ್ಯವೆಂದು ಪತ್ರದಲ್ಲಿ ರಕ್ಷಣಾ ಸಚಿವರಿಗೆ ಮನವಿ ಮಾಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ

