ಬೆಂಗಳೂರು ಮೂಲದ ಮೇಜರ್ ಸ್ವಾತಿಗೆ ವಿಶ್ವಸಂಸ್ಥೆ ಗೌರವ

ಆಂತರಿಕ ಸಂಘರ್ಷಗಳಿಂದ ತತ್ತರಿಸಿರುವ ಆಫ್ರಿಕಾ ದೇಶ ದಕ್ಷಿಣ ಸುಡಾನ್‌ನಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗಳೊಂದಿಗೆ ಸಲ್ಲಿಸಿದ ಅಪೂರ್ವ ಸೇವೆಯನ್ನು ಪರಿಗಣಿಸಿ, ಬೆಂಗಳೂರು ಮೂಲದ ಮೇಜರ್ ಸ್ವಾತಿ ಶಾಂತಕುಮಾರ್ ಅವರಿಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ ನೀಡಿದೆ.

ಸದ್ಯ ದಕ್ಷಿಣ ಸುಡಾನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಮೇಜರ್ ಸ್ವಾತಿ ಶಾಂತಕುಮಾರ್ ಅವರಿಗೆ ಈ ಗೌರವವನ್ನು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರೆಸ್ ಘೋಷಿಸಿದ್ದಾರೆ.

‘ಸಮಾನ ಪಾಲುದಾರರು, ಶಾಶ್ವತ ಶಾಂತಿ’ ಎಂಬ ವಿಭಾಗದಲ್ಲಿ ಈ ಪ್ರಶಸ್ತಿ ನೀಡಲಾಗಿದ್ದು, ವಿಶ್ವದ ವಿವಿಧ ವಿಶ್ವಸಂಸ್ಥೆ ಶಾಂತಿಪಾಲನಾ ಮಿಷನ್‌ಗಳು ಹಾಗೂ ಏಜೆನ್ಸಿಗಳಿಂದ ಬಂದ ಅನೇಕ ನಾಮನಿರ್ದೇಶನಗಳ ಪೈಕಿ ಅಂತಿಮವಾಗಿ ನಾಲ್ಕು ತಂಡಗಳು ಆಯ್ಕೆಯಾಗಿದ್ದವು. ಈ ಪೈಕಿ ಮೇಜರ್ ಸ್ವಾತಿ ನೇತೃತ್ವದ ಭಾರತೀಯ ತಂಡ ಅತಿ ಹೆಚ್ಚು ಮತಗಳನ್ನು ಪಡೆದು ಪ್ರಶಸ್ತಿಗೆ ಪಾತ್ರವಾಗಿದೆ.

ಮೇಜರ್ ಸ್ವಾತಿ ಶಾಂತಕುಮಾರ್ ಅವರ ನೇತೃತ್ವದಲ್ಲಿ ಭಾರತೀಯ ಶಾಂತಿಪಾಲನಾ ತಂಡವು ದಕ್ಷಿಣ ಸುಡಾನ್‌ನ ಗ್ರಾಮೀಣ ಹಾಗೂ ದುರ್ಗಮ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಮಹತ್ವದ ಕೊಡುಗೆ ನೀಡಿದೆ. ಅತ್ಯಂತ ಕಠಿಣ ಪರಿಸ್ಥಿತಿಗಳ ನಡುವೆಯೂ ಕುಗ್ರಾಮಗಳಲ್ಲಿ ಗಸ್ತು ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಿದೆ.

ಸಂಘರ್ಷ ಪೀಡಿತ ಪ್ರದೇಶಗಳಲ್ಲಿ 5,000ಕ್ಕೂ ಹೆಚ್ಚು ಮಹಿಳೆಯರಿಗೆ ಸುರಕ್ಷತೆ ಒದಗಿಸಲಾಗಿದ್ದು, ಇದರ ಪರಿಣಾಮವಾಗಿ ಮಹಿಳೆಯರ ಸಮುದಾಯದ ಭಾಗವಹಿಸುವಿಕೆ ಹೆಚ್ಚಾಗಿದೆ. ಜೊತೆಗೆ ಸ್ಥಳೀಯ ಜನರಲ್ಲಿ ವಿಶ್ವಾಸ ಮತ್ತು ಸಂವಹನ ಬಲಗೊಂಡಿದೆ ಎಂದು ವಿಶ್ವಸಂಸ್ಥೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಮೇಜರ್ ಸ್ವಾತಿ ಶಾಂತಕುಮಾರ್ ಅವರ ಈ ಸಾಧನೆ ಭಾರತೀಯ ಸೇನೆ ಮತ್ತು ದೇಶದ ಹೆಮ್ಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವರದಿ : ಲಾವಣ್ಯ ಅನಿಗೋಳ

About The Author