ಸ್ವಾತಂತ್ರ್ಯ ದಿನದಂದು ಈ ಮೆಟ್ರೋ ಸ್ಟೇಷನ್ ಬಂದ್? ಪ್ರಯಾಣಿಕರು ಈ ಬದಲಾವಣೆ ಗಮನಿಸಿ!

ನೀವೇನಾದರೂ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ನಮ್ಮ ಮೆಟ್ರೋ ಮೂಲಕ ಪ್ರಯಾಣಿಸಲು ಪ್ಲ್ಯಾನ್ ಮಾಡಿದ್ದರೆ ಈ ಸುದ್ದಿ ನಿಮಗೆ ತುಂಬಾನೇ ಮುಖ್ಯವಾಗಿದ್ದು, ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಕಡೆಯಿಂದ ಪ್ರಯಾಣಿಕರಿಗೆ ಪ್ರಮುಖ ಎಚ್ಚರಿಕೆ ನೀಡಲಾಗಿದೆ.

ವಿಧಾನಸೌಧದಲ್ಲಿ ಅಂದು ‘ಫ್ರೀಡಂ ಹಬ್ಬ’ ಕಾರ್ಯಕ್ರಮವಿರುವುದರಿಂದ, ಸಾರ್ವಜನಿಕರ ಜನದಟ್ಟಣೆಯನ್ನು ತಪ್ಪಿಸುವ ಹಾಗೂ ಭದ್ರತೆಯ ದೃಷ್ಟಿಯಿಂದ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಆಗಸ್ಟ್ 15ರಂದು ಡಾ. ಬಿ.ಆರ್. ಅಂಬೇಡ್ಕರ್ – ವಿಧಾನಸೌಧ ಮೆಟ್ರೋ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದ್ದು, ಅಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9:30 ಗಂಟೆಯವರೆಗೆ ಈ ನಿಲ್ದಾಣಕ್ಕೆ ಪ್ರಯಾಣಿಕರ ಪ್ರವೇಶ ಹಾಗೂ ನಿರ್ಗಮನ ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿರುತ್ತದೆ.

ಈ ನಿರ್ದಿಷ್ಟ ಅವಧಿಯಲ್ಲಿ ಮೆಟ್ರೋ ರೈಲುಗಳು ಕೂಡ ಈ ನಿಲ್ದಾಣದಲ್ಲಿ ನಿಲುಗಡೆ ಮಾಡುವುದಿಲ್ಲವಾದ್ದರಿಂದ, ಪ್ರಯಾಣಿಕರು ವಿಧಾನಸೌಧದ ಬದಲಾಗಿ ಹತ್ತಿರವಿರುವ ಕಬ್ಬನ್ ಪಾರ್ಕ್ ಅಥವಾ ಸರ್ ಎಂ. ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜು ಮೆಟ್ರೋ ನಿಲ್ದಾಣಗಳನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.

ಕಾರ್ಯಕ್ರಮ ಮುಗಿದ ಬಳಿಕ ರಾತ್ರಿ 9:30ರ ನಂತರ ವಾಪಸ್ ತೆರಳುವವರಿಗಾಗಿ ಮೆಟ್ರೋ ನಿಲ್ದಾಣದ ಬಾಗಿಲು ಮತ್ತೆ ತೆರೆಯಲಾಗುವುದು ಹಾಗೂ ಜನಸಂದಣಿಗೆ ತಕ್ಕಂತೆ ರಾತ್ರಿ ವೇಳೆ ಹೆಚ್ಚುವರಿ ಮೆಟ್ರೋ ರೈಲುಗಳ ಸೇವೆಯನ್ನು ಒದಗಿಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

About The Author