ಬೆಂಗಳೂರು ರಸ್ತೆ ಗುಂಡಿಗಳ ವಿಚಾರ ಇದೀಗ ತೀವ್ರ ರಾಜಕೀಯ ಹಾದಿ ಹಿಡಿದಿದೆ. ಬ್ಲಾಕ್‌ಬಕ್ ಕಂಪನಿಯ ಸಿಇಒ ಅವರ ಟ್ವೀಟ್ ನಂತರ ಈ ವಿಷಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನವೆಂಬರ್ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚುವುದಾಗಿ ಘೋಷಿಸಿದ್ದಾರೆ. ಆದರೆ, ವಿರೋಧ ಪಕ್ಷದ ನಾಯಕರು ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರಿನ ಪ್ರತಿಷ್ಠೆಗೆ ಇಂದು ಘೋರ ಪೆಟ್ಟು ಬಿದ್ದಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇಬ್ಬರೂ ಈ ಅಪಮಾನಕ್ಕೆ ಹೊಣೆಗಾರರು ಎಂದಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದು, ಸೂಪರ್ ಸಿಎಂ ಶ್ರೀ ಸುರ್ಜೇವಾಲ ಅವರಿಗೆ ಗುಂಡಿಗಳ ನಗರಕ್ಕೆ ಸ್ವಾಗತ. ಸ್ಟಾರ್ ಹೋಟೆಲ್ ಒಳಗೆ ನಿಮ್ಮ ಸಭೆಗಳನ್ನು ಮುಗಿಸುವುದು ಉತ್ತಮ, ಏಕೆಂದರೆ ಹೊರಗೆ ಬಂದರೆ ಬೆಂಗಳೂರಿನ ರೋಲರ್-ಕೋಸ್ಟರ್ ರಸ್ತೆಗಳಿಗೆ ಸುರಕ್ಷತಾ ಸಾಧನಗಳು ಹಾಗೂ ಕಸದ ದುರ್ವಾಸನೆಗೆ ಮೂಗಿನ ಕ್ಲಿಪ್ ಬೇಕಾಗುತ್ತದೆ. ಉಪ ಮುಖ್ಯಮಂತ್ರಿ ಅವರೇ, ನಿಮ್ಮ ಘನತೆಯನ್ನು ಕಳೆದುಕೊಳ್ಳಬೇಡಿ. ಬೆಂಗಳೂರಿನ ನಾಗರಿಕರು ರಾಜ್ಯಕ್ಕೆ ನೀಡಿರುವ ಕೊಡುಗೆಗೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇತ್ತ ಬ್ಲಾಕ್‌ಬಕ್ ಸಿಇಒ ರಾಜೇಶ್ ಯಾಬಾಜಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು, 2015ರಲ್ಲಿ ಕೋರಮಂಗಲದಲ್ಲಿ ಆರಂಭವಾದ ನಮ್ಮ ಸಂಸ್ಥೆ, 2016ರಲ್ಲಿ ಬೆಳ್ಳಂದೂರು ಹೊರವಲಯಕ್ಕೆ ಸ್ಥಳಾಂತರಗೊಂಡಿತು. ಬೆಂಗಳೂರಿನ ಪರಿಸರ ವ್ಯವಸ್ಥೆ ಹಾಗೂ ಕರ್ನಾಟಕದ ಸಂಪನ್ಮೂಲಗಳು ನಮ್ಮ ಬೆಳವಣಿಗೆಗೆ ಕಾರಣವಾಗಿವೆ. ನಾವು ಬೆಂಗಳೂರನ್ನು ಬಿಟ್ಟು ಹೊರಡುವುದಿಲ್ಲ, ಕೇವಲ ಕಚೇರಿ ಸ್ಥಳಾಂತರ ನಡೆಯುತ್ತಿದೆ ಎಂಬ ಮಾತುಗಳು ನಿಜವಲ್ಲ. ಬೆಂಗಳೂರೇ ನಮ್ಮ ಬೆಳವಣಿಗೆಗೆ ಪೂರಕವಾಗಿರುವ ನಗರ ಮತ್ತು ಮುಂದೆಯೂ ಇಲ್ಲಿ ನಮ್ಮ ಬೃಹತ್ ಯೋಜನೆಗಳು ಮುಂದುವರಿಯಲಿವೆ ಎಂದು ತಿಳಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ