Bhagyalakshmi Scheme Maturity: 1.58 ಲಕ್ಷ ಫಲಾನುಭವಿಗಳಿಗೆ ಹಣ ಜಮೆ – ಬಾಂಡ್ ಇದ್ದವರಿಗೆ ಗುಡ್ ನ್ಯೂಸ್!

ಭಾಗ್ಯಲಕ್ಷ್ಮೀ ಯೋಜನೆಗೆ ಕಳೆದ ವರ್ಷಕ್ಕೇ 18 ವರ್ಷ ತುಂಬಿದ್ದು, 1.58 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೆಚ್ಯೂರಿಟಿ ಹಣ ಪಾವತಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಕ್ಕಳ ಭವಿಷ್ಯಕ್ಕೆ ನೆರವಾಗುವಂತೆ, 2006-07ರಲ್ಲಿಅಂದಿನ ಸಿಎಂ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರ್ಕಾರ, ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿತ್ತು.

ಬಡ ಕುಟುಂಬಗಳಲ್ಲಿ ಜನಿಸಿದ 2 ಹೆಣ್ಣು ಮಕ್ಕಳಿಗೆ ನಿಶ್ಚಿತ ಠೇವಣಿ ಹೂಡಿ, 18 ವರ್ಷ ಪೂರ್ಣಗೊಂಡ ನಂತರ ಬಡ್ಡಿ ಸಹಿತ ಹಣ ನೀಡುವ ಉದ್ದೇಶ ಇಟ್ಟುಕೊಳ್ಳಲಾಗಿತ್ತು. ಈಗ ಲಕ್ಷಾಂತರ ಹೆಣ್ಣು ಮಕ್ಕಳಿಗೆ ತಮ್ಮ ಪಾಲಿನ ಹಣ ಸಿಕ್ಕಿದೆ. ಈ ಯೋಜನೆಯಡಿ ಆರಂಭಿಕ ವರ್ಷದಲ್ಲಿ 2.30 ಲಕ್ಷಕ್ಕೂ ಹೆಚ್ಚು ಮಂದಿ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್‌ ಪಡೆದಿದ್ದರು. ಈ ಪೈಕಿ ಇದೀಗ 1,58,414 ಮಕ್ಕಳಿಗೆ, ತಲಾ 32,351 ರೂ.ಗಳಂತೆ ಮೆಚ್ಯೂರಿಟಿ ಹಣ ನೀಡಲಾಗಿದೆ.

2024ರ ಏಪ್ರಿಲ್‌ ಮತ್ತು ಮೇ ತಿಂಗಳ ಅಂತ್ಯಕ್ಕೆ ಈ ಬಾಲಕಿಯರು ಯೋಜನೆಯ ಮೆಚ್ಯೂರಿಟಿಗೆ ಅರ್ಹರಾಗಿದ್ದರು. ಇವರೆಲ್ಲರಿಗೂ ಆದ್ಯತೆ ಮೇರೆಗೆ ಎಲ್‌ಐಸಿಯಿಂದ ಮೆಚ್ಯೂರಿಟಿ ಮೊತ್ತ ಮಂಜೂರಾಗಿದೆ. ಇಲಾಖೆ ಫಲಾನುಭವಿಗಳಿಂದ ಅಗತ್ಯ ದಾಖಲೆ ಪಡೆದು ಹಣ ರವಾನಿಸುವ ವ್ಯವಸ್ಥೆ ಮಾಡುತ್ತಿದೆ.

ಇನ್ನು, ರಾಜ್ಯದಲ್ಲಿ ಆರಂಭದಿಂದ ಈವರೆಗೆ 35 ಲಕ್ಷ ಮಂದಿ ಭಾಗ್ಯಲಕ್ಷ್ಮಿ ಬಾಂಡ್ ಪಡೆದಿದ್ದಾರೆ. ಪ್ರತಿ ವರ್ಷ ಜನನವಾಗುತ್ತಿದ್ದಂತೆ ಅರ್ಹತೆ ಆಧಾರದಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ವರ್ಷಕ್ಕೆ 1.50ರಿಂದ 3 ಲಕ್ಷ ಮಂದಿ ಹೆಸರು ನೋಂದಾಯಿಸುತ್ತಿದ್ದಾರೆ.

About The Author