Political News: ಭೈರತಿ ಸುರೇಶ್ ಓರ್ವ ರಿಯಲ್ ಎಸ್ಟೇಟ್ ಗಿರಾಕಿ. ಅವನು ಮಂತ್ರಿ ಅಲ್ಲ ಕಂತ್ರಿ. ಮಂತ್ರಿ ಥರ ಆಡು ಅಂದ್ರೆ ಕಂತ್ರಿ ಥರ ಆಡುತ್ತಾನೆ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಭೈರತಿ ಸುರೇಶ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮೂಡಾ ಹಗರಣ ವಿಚಾರಕ್ಕಾಗಿ ಆರೋಪ ಮಾಡಿರುವ ಹಿನ್ನೆಲೆ, ಭೈರತಿ ಸುರೇಶ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅನಾವಶ್ಯಕವಾಗಿ ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಸುಮ್ಮ ಸುಮ್ಮನೆ ಆರೋಪ ಮಾಡುವ ಸಚಿವರ ಮಾತಿಗೆ, ಸಿಎಂ ಸಿದ್ದರಾಮಯ್ಯ ಚಪ್ಪಾಳೆ ಹೊಡೆಯುತ್ತಾರೆ. ಅಂದ್ರೆ ಸಿಎಂ ಸುಳ್ಳು ಹೇಳುವವರನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದರ್ಥ ಎಂದು ವಿಶ್ವನಾಥ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ, ರಾಜ್ಯ ಸರ್ಕಾರ ಮುಡಾ ಹಗರಣದಿಂದ ತತ್ತರಿಸಿ ಹೋಗಿದ್ದು, ಅದರಿಂದ ತಪ್ಪಿಸಿಕೊಳ್ಳಲು ಸಿಎಂ ಕಸರತ್ತು ಮಾಡುತ್ತಿದ್ದಾರೆ ಎಂದು ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.
ಮೂಡಾ ಹಗರಣದಲ್ಲಿ ಅಕ್ರಮ ಮುಂದುವರೆದಿದ್ದು, ಈ ಬಗ್ಗೆ ಸರಿಯಾದ ತನಿಖೆ ನಡೆಯಲೇಬೇಕು. ಮುಡಾ ಆಯುಕ್ತರಾಗಿದ್ದ ದಿನೇಶ್ ಕುಮಾರ್, ಈಗಲೂ ವಿಧಾನಸೌಧದಲ್ಲಿ ಅಕ್ರಮ ನಡೆಸುತ್ತಿದ್ದಾರೆ. ನಾನು ಮತ್ತು ಶಾಸಕ ಶ್ರೀವತ್ಸ ಬಿಟ್ಟರೆ ಉಳಿದ ಎಲ್ಲ ಪಕ್ಷದ ಜನಪ್ರತಿನಿಧಿಗಳು ಮೂಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ವಿಶ್ವನಾಥ್ ಆರೋಪಿಸಿದ್ದಾರೆ.