ಬೆಂಗಳೂರು : ಮದುವೆಯಾಗದೇ ನಟಿ ಭಾವನಾ ರಾಮಣ್ಣ ಅವರು ಕೆಲ ತಿಂಗಳಲ್ಲೇ ತಾಯಿಯಾಗಲಿದ್ದಾರೆ. IAF ಮೂಲಕ ಗರ್ಭಿಣಿಯಾಗಿರುವ ನಟಿ ಭಾವನಾ, ಅವಳಿ ಮಕ್ಕಳಿಗೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಜನ್ಮ ನೀಡಲಿದ್ದಾರೆ. ಈ ಗುಡ್‌ನ್ಯೂಸ್ ಜೊಚೆಗೆ ಭಾವನಾ ಅವರು ಐವಿಎಫ್ ಕಾರ್ಯವಿಧಾನ ಹಾಗೂ ವೀರ್ಯ ದಾನಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಐವಿಎಫ್ ವಿಧಾನದ ಮೂಲಕ ಗರ್ಭ ಧರಿಸುವ ಮುನ್ನ ಕೆಲವು ನಿಯಮಗಳನ್ನು ಅನುಸರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಭಾವನಾ ಅವರು ಮದುವೆ, ಸಂಗಾತಿಯಿಲ್ಲದೆ ದಿಟ್ಟ ತನದ ಹೆಜ್ಜೆ ಇಟ್ಟಿದ್ದು, ವೀರ್ಯ ದಾನಿಗಳಿಗೂ ಕೆಲವು ನಿಯಮಗಳು ಇರುತ್ತವೆ ಎಂದಿದ್ದಾರೆ. ದಾನಿಗಳಲ್ಲಿ ಮಹಿಳೆಯರು ಹಾಗೂ ಪುರುಷರು ಎಂಬ ವಿಧಗಳಿವೆ. ಆದರೆ ವೀರ್ಯ ದಾನಕ್ಕೂ ಮೊದಲು ಎಲ್ಲ ರೀತಿಯ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಮುಖ್ಯವಾಗಿ ದಾನಿಯ ಆಯ್ಕೆ ಮಾಡುವ ವೇಳೆಯಲ್ಲಿ ಅವರ ಕ್ರಿಮಿನಲ್ ಹಿನ್ನೆಲೆಯನ್ನೂ ತಪಾಸಣೆ ಮಾಡಲಾಗುತ್ತದೆ. ಅಲ್ಲದೆ ಅವರ ವಯಸ್ಸು, ಎಲ್ಲ ರೀತಿಯ ಅಂದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತದೆ. ಅವರ ಶೈಕ್ಷಣಿಕ ಹಿನ್ನೆಲೆ, ವಿದ್ಯಾಹರ್ತೆಯ ಬಗ್ಗೆ ಗಮನಿಸಲಾಗುತ್ತದೆ ಎಂದು ವೀರ್ಯ ದಾನದ ಗುಟ್ಟನ್ನು ಭಾವನಾ ಬಿಚ್ಚಿಟ್ಟಿದ್ದಾರೆ.
ದಾನಿಗಳಾಗಿ ನಾವೂ ವೀರ್ಯ ನೀಡಬಹುದು ಎಂದು ನನ್ನ ಹಲವು ಫ್ರೆಂಡ್ಸ್ ಹೇಳಿದ್ದರು. ಆದರೆ, ಒಬ್ಬರು ಹೇಳಿದ ಮಾತು ನನಗೆ ಬಹಳಷ್ಟು ಸೆನ್ಸಿಬಲ್ ಅಂತ ಅನಿಸಿತು. ನಾವು ದಾನ ಕೊಡಬಹುದು. ಆದರೆ, ನಾಳೆ ಮಕ್ಕಳು ನಮ್ಮ ಎದುರಿಗೆ ಓಡಾಡುತ್ತಿರುತ್ತಾರೆ. ಅದರ ಬಗ್ಗೆ ಹೇಳದೆ ನಾವು ಹೇಗೆ ಇರೋದಕ್ಕೆ ಆಗುತ್ತದೆ ಎಂದು ಪ್ರಶ್ನಿಸಿದರು. ಅಲ್ಲದೆ ಅವ್ರು ನನ್ನ ಮಕ್ಕಳು ಅಂತ ಗೊತ್ತಿರುತ್ತದೆ. ಹಾಗಂತ ಅದನ್ನು ಇಗ್ನೋರ್ ಮಾಡೋಕೆ ಆಗುತ್ತಾ? ಎಂದು ಅವರು ಕೇಳಿದ್ದರು. ಆಗ ಅದು ನಿಜ ಎಂದು ನನಗೂ ಅನಿಸಿತು ಎಂದು ಮುಕ್ತವಾಗಿ ಮಾತನಾಡಿದ್ದಾರೆ.
ಇನ್ನೂ ಗೊತ್ತಿರುವವರೇ ದಾನ ಕೊಟ್ಟರೆ, ನಾಳೆ ಅಟ್ಯಾಚ್‌ಮೆಂಟ್ ಶುರುವಾಗಬಹುದು. ನಿಮ್ಮ ಜವಾಬ್ದಾರಿಯನ್ನ ನಿರ್ವಹಿಸಿ ಅಂತಲೂ ನಾಳೆ ನಾನೂ ಕೇಳಬಹುದು. ಇದು ತುಂಬಾ ಕಾಂಪ್ಲಿಕೇಟ್ ಆಗಬಹುದು. ನನ್ನ ಮಕ್ಕಳಿಗೆ ಈ ರೀತಿಯ ಬರ್ಡನ್ ಬೇಡ ಅಂತ ನನಗೆ ಅನಿಸಿತು ಎಂದು ನಟಿ ಭಾವನಾ ರಾಮಣ್ಣಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ದಾನಿಯ ಆಯ್ಕೆಯ ಕುರಿತು ನಮಗೆ ಸ್ವಾತಂತ್ರ್ಯ ಇದೆಯೋ? ಇಲ್ವೋ ಗೊತ್ತಿಲ್ಲ. ಆದರೆ ನಾನು ನೇರವಾಗಿ ವೈದ್ಯರನ್ನು ನಂಬಿದ್ದೆ, ಹೀಗಾಗಿ ದಾನಿಯನ್ನು ಆಯ್ಕೆ ಮಾಡಲಿಲ್ಲ. ಮುಖ್ಯವಾಗಿ ಆಹಾರ ಅಭ್ಯಾಸ, ಜೀನ್ಸ್ ಒಂದೇ ರೀತಿಯಾಗಿ ಇರುತ್ತದೆ ಎಂಬ ಕಾರಣಕ್ಕೆ ದಕ್ಷಿಣ ಭಾರತದವರೇ ಇರಲಿ ಎಂದು ವೈದ್ಯರಿಗೆ ಹೇಳಿದ್ದೆ ಎಂದು ಭಾವನಾ ತಮ್ಮ ಭಾವನೆಗಳನ್ನು ಹೊರಗೆಡವಿದ್ದಾರೆ.