ಜಿಬಿಎ ಚುನಾವಣೆಗೆ ಮುನ್ನ ದೊಡ್ಡ ಸ್ಫೋಟ?

ಸುಪ್ರೀಂ ಕೋರ್ಟ್ GBA ವ್ಯಾಪ್ತಿಯಲ್ಲಿ ಜೂನ್‌ 30ರೊಳಗೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದ ಬೆನ್ನಲ್ಲೇ ಚುನಾವಣಾ ಸಿದ್ಧತೆಗಳು ಗರಿಗೆದರಿವೆ. ಇದರ ನಡುವೆ GBA ವ್ಯಾಪ್ತಿಯ ಐದು ನಗರಪಾಲಿಕೆಗಳಲ್ಲಿ ಮತದಾರರ ಲೆಕ್ಕಾಚಾರದ ಚರ್ಚೆ ಆರಂಭವಾಗಿದ್ದು, ಕರಡು ಮತದಾರರ ಪಟ್ಟಿ ಬಿಡುಗಡೆ ಬಳಿಕ ವಾರ್ಡ್‌ವಾರು ಅಸಮಾನ ಹಂಚಿಕೆ ಬೆಳಕಿಗೆ ಬಂದಿದೆ.

ಒಂದೊಂದು ವಾರ್ಡ್‌ಗಳಲ್ಲಿ ಒಂದೊಂದು ರೀತಿಯ ಮತದಾರರ ಸಂಖ್ಯೆ ಕಂಡು ಬಂದಿದ್ದು, ಇದು ‘ಒಬ್ಬ ವ್ಯಕ್ತಿ–ಒಂದು ಮತ’ ಎಂಬ ಮೂಲಭೂತ ಪರಿಕಲ್ಪನೆಗೆ ಧಕ್ಕೆ ತರುವ ಸಾಧ್ಯತೆಯನ್ನು ಹುಟ್ಟುಹಾಕಿದೆ. ಪೂರ್ವ ನಗರ ಪಾಲಿಕೆಯ ಕೊತ್ತನೂರು ವಾರ್ಡ್‌ 16 ನಲ್ಲಿ ಕೇವಲ 10,926 ಮತದಾರರಿದ್ದರೆ, ಪಶ್ಚಿಮ ನಗರ ಪಾಲಿಕೆಯ ರಾಜರಾಜೇಶ್ವರಿನಗರ ವಾರ್ಡ್‌ 23 ನಲ್ಲಿ 49,530 ಮತದಾರರು ದಾಖಲಾಗಿರುವುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

ಐದು ನಗರಪಾಲಿಕೆಗಳ ಪೈಕಿ ಉತ್ತರ ನಗರ ಪಾಲಿಕೆಯಲ್ಲಿ ಅತಿ ಹೆಚ್ಚು ಅಸಮತೋಲನ ಕಂಡು ಬಂದಿದ್ದು, ನಾಲ್ಕು ವಾರ್ಡ್‌ಗಳಲ್ಲಿ ಮತದಾರರ ಸಂಖ್ಯೆ 40 ಸಾವಿರ ದಾಟಿದ್ದರೆ, ಕೆಲ ವಾರ್ಡ್‌ಗಳಲ್ಲಿ ಕೇವಲ 17 ಸಾವಿರಕ್ಕೆ ಸೀಮಿತವಾಗಿದೆ. ದಕ್ಷಿಣ ನಗರಪಾಲಿಕೆಯ ವ್ಯಾಪ್ತಿಯಲ್ಲಿ ಎರಡು ಚಿಕ್ಕ ವಾರ್ಡ್‌ಗಳಲ್ಲಿ 14 ಸಾವಿರ ಮತದಾರರಿದ್ದರೆ, ದೊಡ್ಡ ವಾರ್ಡ್‌ಗಳಲ್ಲಿ 50 ಸಾವಿರಕ್ಕೂ ಅಧಿಕ ಮತದಾರರು ದಾಖಲಾಗಿದ್ದಾರೆ.

ಕೇಂದ್ರ ಮತ್ತು ಪೂರ್ವ ನಗರಪಾಲಿಕೆಗಳ ಪೈಕಿ ಕೇಂದ್ರ ಪಾಲಿಕೆಯಲ್ಲಿ ಹೆಚ್ಚಿನ ವಾರ್ಡ್‌ಗಳು 20 ಸಾವಿರದಿಂದ 30 ಸಾವಿರ (ಶೇ.73) ಮತದಾರರನ್ನು ಹೊಂದಿವೆ. 112 ವಾರ್ಡ್‌ಗಳನ್ನು ಒಳಗೊಂಡ ಪಶ್ಚಿಮ ನಗರ ಪಾಲಿಕೆಯಲ್ಲಿ ಸಮಾನ ಹಂಚಿಕೆಗೆ ಇನ್ನಷ್ಟು ಅವಕಾಶವಿದೆ ಎನ್ನಲಾಗಿದೆ.

ಒಟ್ಟಾರೆ 369 ವಾರ್ಡ್‌ಗಳ ಪೈಕಿ
234 ವಾರ್ಡ್‌ಗಳಲ್ಲಿ 20–30 ಸಾವಿರ,
88 ವಾರ್ಡ್‌ಗಳಲ್ಲಿ 10–20 ಸಾವಿರ,
39 ವಾರ್ಡ್‌ಗಳಲ್ಲಿ 30–40 ಸಾವಿರ,
8 ವಾರ್ಡ್‌ಗಳಲ್ಲಿ 40 ಸಾವಿರಕ್ಕಿಂತ ಹೆಚ್ಚು ಹಾಗೂ 50 ಸಾವಿರಕ್ಕಿಂತ ಕಡಿಮೆ ಮತದಾರರು ಹಂಚಿಕೆಯಾಗಿರುವುದು ದಾಖಲೆಗಳಿಂದ ತಿಳಿದು ಬಂದಿದೆ.

ಈ ಅಸಮಾನ ಹಂಚಿಕೆಯಿಂದಾಗಿ ಹೆಚ್ಚಿನ ಮತದಾರರಿರುವ ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವ ಕಾರ್ಪೊರೇಟರ್‌ಗಳಿಗೆ ಹೆಚ್ಚು ಸವಾಲು ಎದುರಾಗಲಿದೆ. ಬಜೆಟ್ ಹಂಚಿಕೆ, ಮೂಲಸೌಕರ್ಯ ಒದಗಿಕೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗುವ ಆತಂಕವೂ ವ್ಯಕ್ತವಾಗಿದೆ. ಒಟ್ಟಿನಲ್ಲಿ, ವಾರ್ಡ್‌ವಾರು ಮತದಾರರ ಅಸಮತೋಲನ ಜಿಬಿಎ ಚುನಾವಣೆಗೆ ಮುನ್ನ ಹೊಸ ಚರ್ಚೆಗೆ ಕಾರಣವಾಗಿದ್ದು, ಚುನಾವಣಾ ಆಯೋಗ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದರತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author