ಬಿಹಾರದಲ್ಲಿ ಚುನಾವಣೆ ನಂತರ ರಾಜಕೀಯ ತಿರುವುಗಳು ದಿನೇದಿನೇ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಆಘಾತಕಾರಿ ಸೋಲಿನ ಬೆನ್ನಲ್ಲೇ ಲಾಲು ಪ್ರಸಾದ್ ಯಾದವ್ ಕುಟುಂಬದಲ್ಲಿ ಭಾರಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ.
ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ತಮ್ಮದೇ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ಮೇಲೆ ನಡೆದ ಕಿರುಕುಳ ಹಾಗೂ ದೈಹಿಕ ದೌರ್ಜನ್ಯ , ನಿಂದನೆ, ಚಪ್ಪಲಿಗಳನ್ನು ಎಸೆಯಲಾಯಿತು ಅಂತ ಹೇಳಿಕೊಂಡಿದ್ದಾರೆ. ರಾಜಕೀಯವನ್ನು ತ್ಯಜಿಸಲು ಮತ್ತು ಕುಟುಂಬವನ್ನು ತ್ಯಜಿಸಲು ನಿರ್ಧರಿಸಿದ್ದೇನೆ ಎಂದು ರೋಹಿಣಿ ಘೋಷಿಸಿ ಸಿಂಗಾಪುರಕ್ಕೆ ತೆರಳಿದ್ದಾರೆ.
ಇದು ರಾಜಕೀಯ ಹೋರಾಟ ಅಲ್ಲ. ಇದು ಕುಟುಂಬದ ಗೌರವ, ಮಗಳ ಘನತೆ ಮತ್ತು ಬಿಹಾರದ ಸ್ವಾಭಿಮಾನಕ್ಕೆ ಸಂಬಂಧಿಸಿದ ಹೋರಾಟ ಎಂದು ರೋಹಿಣಿ ಹೇಳಿದ್ದಾರೆ. ಈ ಘಟನೆ ಇನ್ನೂ ಶಾಂತವಾಗುವ ಮೊದಲೇ ಲಾಲು ಕುಟುಂಬದ ಇನ್ನೊಂದು ಸದಸ್ಯ ಹಾಗೂ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ತಮ್ಮದೇ ಕುಟುಂಬದ ವಿರುದ್ಧ ತಿರುಗಿಬಿದ್ದಿದ್ದಾರೆ.
ತೇಜ್ ಪ್ರತಾಪ್, ಕುಟುಂಬದಿಂದ ದೂರ ಸರಿದು ಸ್ಥಾಪಿಸಿರುವ ತನ್ನ ಹೊಸ ಪಕ್ಷ ‘ಜನಶಕ್ತಿ ಜನತಾದಳ’ ಮೂಲಕ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಬೆಂಬಲ ನೀಡಲು ಸಿದ್ದರಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ತಮ್ಮ ಸಹೋದರಿ ರೋಹಿಣಿ ಆಚಾರ್ಯ ಅವರ ಕುರಿತು ಮಾತನಾಡಿದ ತೇಜ್ ಪ್ರತಾಪ್, ನನಗಾದ ಅನ್ಯಾಯವನ್ನು ಸಹಿಸಿಕೊಂಡೆ. ಆದರೆ ನನ್ನ ಸಹೋದರಿಯ ಮೇಲೆ ಮಾಡಿದ ಅವಮಾನವನ್ನು ಬಿಹಾರದ ಜನರೂ ಸಹ ಮನ್ನಿಸಲಾರರು ಎಂದು ಹೇಳಿದ್ದಾರೆ.
ರೋಹಿಣಿ ಕುಟುಂಬ ಮತ್ತು ರಾಜಕೀಯ ತ್ಯಜಿಸುವ ನಿರ್ಧಾರ ಪ್ರಕಟಿಸಿದ ಒಂದು ದಿನದ ಒಳಗೆ, ತೇಜ್ ಪ್ರತಾಪ್ ಅವರ ಜೆಜೆಡಿ ಪಕ್ಷವು ರೋಹಿಣಿ ಆಚಾರ್ಯರಿಗೆ ಪಕ್ಷದ ‘ಪೋಷಕ ಸ್ಥಾನ’ ನೀಡಿದೆ. ಶೀಘ್ರದಲ್ಲೇ ತೇಜ್ ಪ್ರತಾಪ್ ರೋಹಿಣಿಯೊಂದಿಗೆ ನೇರವಾಗಿ ಮಾತುಕತೆ ನಡೆಸಿ, ಜೆಜೆಡಿ ಸೇರಲು ಮನವೊಲಿಸುವರು ಎಂದು ಪಕ್ಷದ ವಕ್ತಾರ ಪ್ರೇಮ್ ಯಾದವ್ ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ

