ಇನ್ನು ಮುಂದೆ ಆಧಾರ್ ಕಾರ್ಡ್ ಅನ್ನು ಜನನ ಪ್ರಮಾಣ ಪತ್ರ ಅಥವಾ ಜನ್ಮ ದಿನಾಂಕದ ಅಧಿಕೃತ ಪುರಾವೆ ಪರಿಗಣಿಸುವುದಿಲ್ಲ. ಹೌದು ಆಧಾರ್ ಕಾರ್ಡ್ ಅನ್ನು ಜನನ ಪ್ರಮಾಣಪತ್ರ ಅಥವಾ ಜನ್ಮ ದಿನಾಂಕದ ಅಧಿಕೃತ ಪುರಾವೆಯಾಗಿ ಸ್ವೀಕರಿಸುವುದಿಲ್ಲವೆಂದು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ಅಧಿಕೃತ ಆದೇಶಗಳನ್ನು ಹೊರಡಿಸಿವೆ. ಈ ಕುರಿತು ಸಂಬಂಧಿತ ಇಲಾಖೆಗಳು ತಕ್ಷಣ ಜಾರಿಗೊಳಿಸುವಂತೆ ಸೂಚನೆ ಪಡೆದಿವೆ.
ಜನನ–ಮರಣ ನೋಂದಣಿ ತಿದ್ದುಪಡಿ ಕಾಯ್ದೆ, 2023 ಜಾರಿಗೆ ಬಂದ ನಂತರ, ಆಧಾರ್ ಅನ್ನು ಏಕೈಕ ದಾಖಲೆ ಮಾಡಿಕೊಂಡು ನೀಡಲಾದ ಜನನ ಪ್ರಮಾಣಪತ್ರಗಳನ್ನು ರದ್ದುಪಡಿಸಲಾಗುವುದು ಎಂದು ವರದಿಯಾಗಿದೆ. ಸರ್ಕಾರದ ಪ್ರಕಾರ, ಆಧಾರ್ ಕಾರ್ಡ್ ಆಸ್ಪತ್ರೆ ದಾಖಲೆ ಅಥವಾ ಜನನದ ಅಧಿಕೃತ ಸಾಕ್ಷ್ಯವಲ್ಲ.
ಅದು ಕೇವಲ ವೈಯಕ್ತಿಕ ಗುರುತಿನ ವಿವರಗಳನ್ನು ಮಾತ್ರ ಹೊಂದಿರುವ ಕಾರಣ, ಅದನ್ನು ಜನನದ ಕಾನೂನು ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ. ಇನ್ಮುಂದೆ ಆಧಾರ್ ಕಾರ್ಡನ್ನು ಆಧಾರವಾಗಿಟ್ಟುಕೊಂಡು ಜನನ ಪ್ರಮಾಣಪತ್ರ ನೀಡುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಸರ್ಕಾರಗಳು ಎಚ್ಚರಿಕೆ ನೀಡಿವೆ.
ಉತ್ತರ ಪ್ರದೇಶದಲ್ಲಿ ಯಾಕೆ ಈ ಕ್ರಮ? ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಕ್ರಮ ವಲಸಿಗರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ಉತ್ತರ ಪ್ರದೇಶವು ನೇಪಾಳದೊಂದಿಗೆ ಮುಕ್ತ ಗಡಿಯನ್ನು ಹಂಚಿಕೊಂಡಿದೆ. ಇದು ಎರಡೂ ದೇಶಗಳ ನಾಗರಿಕರಿಗೆ ಮುಕ್ತ ಚಲನೆಗೆ ಅನುವು ಮಾಡಿಕೊಡುತ್ತದೆ. ಹೀಗಿದ್ದರೂ ಇತರ ದೇಶಗಳ ಜನರು ತಪಾಸಣೆಗೆ ಒಳಗಾಗಬೇಕು.
ವರದಿ : ಲಾವಣ್ಯ ಅನಿಗೋಳ

