ಕೇಂದ್ರ ಸರ್ಕಾರ ಹೊಸ ಸಾಮಾಜಿಕ ಭದ್ರತಾ ಸಂಹಿತೆಯಡಿ ಗಿಗ್ ಹಾಗೂ ಪ್ಲಾಟ್‌ಫಾರಂ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡಲು ಕರಡು ನಿಯಮಾವಳಿಯನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಉದ್ದೇಶದಿಂದ ಈ ನಿಯಮಾವಳಿಯನ್ನು ಹೊರಡಿಸಲಾಗಿದೆ.
ಕರಡು ಪ್ರಕಾರ, ಒಬ್ಬ ಗಿಗ್ ಅಥವಾ ಪ್ಲಾಟ್‌ಫಾರಂ ಕಾರ್ಮಿಕನು ಒಂದು ಹಣಕಾಸು ವರ್ಷದಲ್ಲಿ ಒಬ್ಬ ಗುತ್ತಿಗೆದಾರನ ಜತೆ ಕನಿಷ್ಠ 90 ದಿನ ಕೆಲಸ ಮಾಡಿರಬೇಕು. ಹಲವು ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುವವರು ಕನಿಷ್ಠ 120 ದಿನಗಳ ಕಾಲ ಕೆಲಸ ಮಾಡಿದರೆ ಮಾತ್ರ ಸೌಲಭ್ಯಗಳಿಗೆ ಅರ್ಹರಾಗುತ್ತಾರೆ.
ಈ ನಿಯಮಾವಳಿಯ ಪ್ರಮುಖ ಅಂಶವೆಂದರೆ, ಕಾರ್ಮಿಕರು ಆದಾಯ ಗಳಿಸಲು ಆರಂಭಿಸಿದ ದಿನದಿಂದಲೇ ಅವರನ್ನು ಕಾರ್ಮಿಕರೆಂದು ಪರಿಗಣಿಸಲಾಗುತ್ತದೆ. ಆದಾಯದ ಪ್ರಮಾಣಕ್ಕೆ ಯಾವುದೇ ಮಿತಿ ವಿಧಿಸಲಾಗಿಲ್ಲ. ಬೇರೆ ಬೇರೆ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡಿದ ದಿನಗಳನ್ನು ಎಲ್ಲ ಪ್ಲಾಟ್‌ಫಾರಂಗಳಲ್ಲೂ ಒಟ್ಟುಗೂಡಿಸಿ ಲೆಕ್ಕ ಹಾಕಲಾಗುತ್ತದೆ.
ಉದಾಹರಣೆಗೆ, ಒಬ್ಬ ಗಿಗ್ ಕಾರ್ಮಿಕನು ಒಂದೇ ದಿನ ಮೂವರು ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡಿದರೆ, ಅದನ್ನು ಮೂರು ಕೆಲಸದ ದಿನಗಳಾಗಿ ಪರಿಗಣಿಸಲಾಗುತ್ತದೆ. ಅರ್ಹ ಗಿಗ್ ಕಾರ್ಮಿಕರನ್ನು ಗುತ್ತಿಗೆದಾರರು ನೇರವಾಗಿ ಅಥವಾ ಸಹ ಕಂಪನಿ, ಉಪಕಂಪನಿ, LLP ಸೇರಿದಂತೆ ಯಾವುದೇ ಮಾರ್ಗದಿಂದ ನೇಮಕ ಮಾಡಿಕೊಂಡಿದ್ದರೂ ಅವರು ಸೌಲಭ್ಯಗಳಿಗೆ ಅರ್ಹರಾಗುತ್ತಾರೆ ಎಂದು ಕರಡು ನಿಯಮಾವಳಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಹೊಸ ಕಾರ್ಮಿಕ ಸಂಹಿತೆಯಡಿ ಗಿಗ್ ಕಾರ್ಮಿಕರಿಗೆ ಆರೋಗ್ಯ ವಿಮೆ, ಜೀವ ವಿಮೆ, ವೈಯಕ್ತಿಕ ಅಪಘಾತ ವಿಮೆ ಸೇರಿದಂತೆ ಸರ್ಕಾರ ವ್ಯವಸ್ಥೆ ಮಾಡುವ ಇತರ ಸಾಮಾಜಿಕ ಭದ್ರತಾ ಕ್ರಮಗಳು ಕಡ್ಡಾಯವಾಗಿವೆ. ಈ ಹಿನ್ನೆಲೆ ಕಾರ್ಮಿಕ ಸಚಿವಾಲಯ ಈಗಾಗಲೇ ಗಿಗ್ ಕಾರ್ಮಿಕರನ್ನು ಆಯುಷ್ಮಾನ್ ಭಾರತ ಯೋಜನೆಯ ಭಾಗವಾಗಿ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಲು ಆರಂಭಿಸಿದೆ.
ವರದಿ : ಲಾವಣ್ಯ ಅನಿಗೋಳ




