ರಾಕಿಂಗ್ ಸ್ಟಾರ್‌ಗೆ ಬಿಗ್ ರಿಲೀಫ್ ಐಟಿ ನೋಟಿಸ್‌ ಔಟ್ !

ರಾಕಿಂಗ್ ಸ್ಟಾರ್ ಯಶ್‌ ಅವರಿಗೆ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟಿಸ್‌ಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಯಶ್‌ ಅವರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಇಲಾಖೆ ನೀಡಿದ್ದ ನೋಟಿಸ್‌ಗಳು ಕಾನೂನುಬದ್ಧವಾಗಿ ಸರಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ತೀರ್ಪಿನಿಂದ ಯಶ್‌ ಅವರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ .. ಬೆಂಗಳೂರಿನ ನಿವಾಸದಲ್ಲಿ ಶೋಧ ಕಾರ್ಯ ನಡೆಯಿದ್ದರೂ, ಯಶ್‌ ಅವರನ್ನು “ಶೋಧಿಸದ ವ್ಯಕ್ತಿ” ಎಂದು ತಪ್ಪಾಗಿ ವರ್ಗೀಕರಿಸಿದ ಅಧಿಕಾರಿಗಳ ಕ್ರಮವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಶೋಧ ನಡೆದಿದ್ದಲ್ಲಿ ಸೆಕ್ಷನ್‌ 153 ‘ಸಿ’ ಅನ್ವಯಿಸುವುದಿಲ್ಲ, ಬದಲಿಗೆ ಬೇರೆ ಪ್ರಕ್ರಿಯೆಗಳು ಅನ್ವಯಿಸಬೇಕಿತ್ತು ಎಂಬುದು ನ್ಯಾಯಾಲಯದ ಅಭಿಪ್ರಾಯ. ಇದರಿಂದಾಗಿ ನೋಟಿಸ್‌ ನೀಡುವಾಗಲೇ ವಿಧಾನ ಉಲ್ಲಂಘನೆಯಾಗಿದೆ ಎಂದು ಸ್ಪಷ್ಟವಾಯಿತು.

2013–14ರಿಂದ 2018–19ರವರೆಗಿನ ಆರು ವರ್ಷಗಳ ಆದಾಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ನೋಟಿಸ್‌ಗಳನ್ನು ಸಹ ಹೈಕೋರ್ಟ್‌ ಸಂಪೂರ್ಣವಾಗಿ ರದ್ದುಗೊಳಿಸಿದೆ. ಶೋಧದಿಂದ ಸಂಗ್ರಹಿಸಿದ್ದ ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್‌, ಇಂತಹ ಪರಿಸ್ಥಿತಿಯಲ್ಲಿ ವಿಭಾಗವು 153 ‘ಸಿ’ ಅಡಿ ನೋಟಿಸ್‌ ನೀಡಲು ಕಾನೂನುಬದ್ಧ ಅಧಿಕಾರವಿಲ್ಲ ಎಂಬುದನ್ನೂ ತಿಳಿಸಿದೆ.

ಹೊಂಬಾಳೆ ಕನ್‌ಸ್ಟ್ರಕ್ಷನ್ಸ್‌ ಸಂಬಂಧಿಸಿದ ತನಿಖೆ ಹಿನ್ನಲೆಯಲ್ಲಿ ಯಶ್‌ ಅವರ ಮನೆಯಲ್ಲಿ ಮತ್ತು ತಾಜ್‌ ವೆಸ್ಟ್‌ ಎಂಡ್‌ನಲ್ಲಿ ಐಟಿ ಇಲಾಖೆ 2021ರಲ್ಲಿ ಶೋಧ ನಡೆಸಿತ್ತು. ಈ ಶೋಧದ ನಂತರ ನೀಡಲಾಗಿದ್ದ ನೋಟಿಸ್‌ಗಳ ವಿರುದ್ಧ ಯಶ್‌ ನ್ಯಾಯಾಲಯದ ಮೊರೆ ಹೋಗಿದ್ದರು. ಆ ನೋಟಿಸ್‌ಗಳನ್ನು ಹೈಕೋರ್ಟ್‌ ಈಗ ಸಂಪೂರ್ಣವಾಗಿ ಅಮಾನ್ಯಗೊಳಿಸಿದೆ.

ಸುದೀರ್ಘ ವಾದ-ಪ್ರತಿವಾದಗಳ ನಂತರ ನೀಡಿದ ಈ ತೀರ್ಪು ಐಟಿ ಇಲಾಖೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ಸಂದೇಶ ನೀಡಿ, ಪ್ರಕ್ರಿಯಾ ನ್ಯಾಯತೆಯ ಮಹತ್ವವನ್ನು ಮತ್ತೊಮ್ಮೆ ಹೈಕೋರ್ಟ್‌ ಎತ್ತಿಹಿಡಿದಂತಾಗಿದೆ…

ವರದಿ : ಗಾಯತ್ರಿ ನಾಗರಾಜ್

About The Author