ಕೇಂದ್ರ ಚುನಾವಣಾ ಆಯೋಗದ ಮೇಲಿನ ಟೀಕೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ದೇಶದ ನ್ಯಾಯಾಂಗ, ಆಡಳಿತ ಮತ್ತು ರಕ್ಷಣಾ ಕ್ಷೇತ್ರದ ಗಣ್ಯರು ಒಟ್ಟಾಗಿ ಚುನಾವಣಾ ಆಯೋಗದ ಪರ ನಿಂತಿದ್ದಾರೆ. 16 ನ್ಯಾಯಮೂರ್ತಿಗಳು, 123 ನಿವೃತ್ತ ಆಡಳಿತಾಧಿಕಾರಿಗಳು ಮತ್ತು 133 ಸಶಸ್ತ್ರ ಪಡೆಗಳ ನಿವೃತ್ತ ಅಧಿಕಾರಿಗಳು ಸೇರಿ ಒಟ್ಟು 272 ಗಣ್ಯರು ಚುನಾವಣಾ ಆಯೋಗವನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸುವ ಬಹಿರಂಗ ಪತ್ರ ಪ್ರಕಟಿಸಿದ್ದಾರೆ.
ಪತ್ರಕ್ಕೆ ಸಹಿ ಹಾಕಿದವರಲ್ಲಿ ಜಮ್ಮು–ಕಾಶ್ಮೀರದ ಮಾಜಿ ಡಿಜಿಪಿ ಎಸ್.ಪಿ. ವೈದ್, ಮಾಜಿ ರಾ ಮುಖ್ಯಸ್ಥ ಸಂಜೀವ್ ತ್ರಿಪಾಠಿ, ಮಾಜಿ ಐಎಫ್‌ಎಸ್ ಅಧಿಕಾರಿ ಲಕ್ಷ್ಮಿ ಪುರಿ ಸೇರಿದಂತೆ ಹಲವಾರು ಪ್ರಮುಖರು ಸೇರಿದ್ದಾರೆ. ಈ ಪತ್ರ, ಇತ್ತೀಚೆಗೆ ರಾಹುಲ್ ಗಾಂಧಿ ಎಸ್‌ಐಆರ್ ಪ್ರಕ್ರಿಯೆ ಮತ್ತು ಚುನಾವಣಾ ಆಯೋಗವನ್ನು ಮತಗಳ್ಳತನಕ್ಕೆ ಅನುಕೂಲ ಮಾಡಿಕೊಡುತ್ತಿದೆ ಎಂದು ಆರೋಪಿಸಿದ ಹಿನ್ನೆಲೆ ಹೊರಬಂದಿರುವುದು ಗಮನಾರ್ಹ.
ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗದ ನಡವಳಿಕೆಯನ್ನು ತೀವ್ರ ನಿರಾಶಾದಾಯಕ ಎಂದು ಟೀಕಿಸಿ, ಆಯೋಗವು ಬಿಜೆಪಿಯ ಪ್ರಭಾವಕ್ಕೆ ಒಳಪಡಿಲ್ಲ ಎಂಬುದನ್ನು ತಕ್ಷಣವೇ ಸಾಬೀತುಪಡಿಸಬೇಕೆಂದು ಒತ್ತಾಯಿಸಿತ್ತು. ಆದರೆ ಗಣ್ಯರು ರಚಿಸಿದ ಈ ಪತ್ರದಲ್ಲಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ಆರೋಪಗಳನ್ನು ಆಧಾರವಿಲ್ಲದ, ಅತಿರೇಕದ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಕುಂದಿಸುವಂತದ್ದು ಎಂದು ಕಟುವಾಗಿ ಖಂಡಿಸಲಾಗಿದೆ.
ರಾಷ್ಟ್ರೀಯ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಾಳಿ ಎಂಬ ಶೀರ್ಷಿಕೆಯಡಿ ಹೊರಬಂದಿರುವ ಈ ಪತ್ರದಲ್ಲಿ, ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ಮಾಡಿದ ಆರೋಪಗಳನ್ನು ಗಂಭೀರವಾಗಿ ಪ್ರಶ್ನಿಸಲಾಗಿದೆ. ಅವರು ಚುನಾವಣಾ ಆಯೋಗವು ಮತಕಳ್ಳತನದಲ್ಲಿ ಭಾಗಿಯಾಗಿದೆ, ತನ್ನ ಬಳಿ 100% ಪುರಾವೆಗಳಿವೆ, ಇದೊಂದು ಪರಮಾಣು ಬಾಂಬ್ ಎಂದು ಹೇಳಿಕೆ ನೀಡಿರುವುದನ್ನು ಪತ್ರದಲ್ಲಿ ತೀವ್ರ ಟೀಕಿಸಲಾಗಿದೆ.
ಅಲ್ಲದೆ, ಸಿಇಸಿ ಮತ್ತು ಇತರ ಚುನಾವಣಾ ಆಯುಕ್ತರು ನಿವೃತ್ತರಾದ ನಂತರ ಅವರನ್ನು “ಬೇಟೆಯಾಡುವೆ” ಎಂಬ ರೀತಿಯ ಬೆದರಿಕೆ ಮಾತುಗಳನ್ನು ಕೂಡ ಖಂಡಿಸಲಾಗಿದೆ. ಇಂತಹ ಗಂಭೀರ ಆರೋಪಗಳನ್ನು ಹೊರಿಸುತ್ತಾ, ಯಾವುದೇ ದಾಖಲಾತಿಗಳೊಂದಿಗೆ ಅಧಿಕೃತ ದೂರು ಸಲ್ಲಿಸದಿರುವುದು ವಿರೋಧಾಭಾಸ ಮತ್ತು ಜವಾಬ್ದಾರಿಯಿಲ್ಲದ ನಡೆ ಎಂದು ಪತ್ರದಲ್ಲಿ ವಿಮರ್ಶಿಸಲಾಗಿದೆ. ಒಟ್ಟಿನಲ್ಲಿ, ಈ ಪತ್ರವು ದೇಶದ ಸಾಂವಿಧಾನಿಕ ಸಂಸ್ಥೆಗಳ ಗೌರವವನ್ನು ಕಾಪಾಡುವ ಹೆಸರಿನಲ್ಲಿ, ವಿರೋಧ ಪಕ್ಷದ ನಾಯಕನ ವಿರುದ್ಧ ಕಠಿಣ ಸಂದೇಶ ನೀಡಿರುವುದು ಸ್ಪಷ್ಟ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

