ಕರ್ನಾಟಕ ಸರ್ಕಾರವು ಕಳೆದ ಒಂದು ವರ್ಷದ ಅವಧಿಯಲ್ಲಿ ಆಸ್ತಿ ತೆರಿಗೆ ಹಾಗೂ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವಾರು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಈಗಾಗಲೇ ಇ–ಖಾತಾ, ಬಿ–ಖಾತಾ ತಿದ್ದುಪಡಿ ಹಾಗೂ ಎ–ಖಾತಾ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಇದೀಗ ಮನೆ ಮಾಲೀಕರು ಮತ್ತು ಬಾಡಿಗೆದಾರರಿಗೆ ಹೊಸ ಶಾಕ್ ನೀಡಲು ಮುಂದಾಗಿದೆ. ರಾಜ್ಯದ ಬೆಂಗಳೂರು–ಮೈಸೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಮನೆ ಬಾಡಿಗೆ ಗಗನಕ್ಕೇರಿರುವ ಈ ಸಮಯದಲ್ಲಿ ಮಹತ್ವದ ಬದಲಾವಣೆಗಳನ್ನು ಸರ್ಕಾರ ಘೋಷಿಸಿದೆ.
ಸರ್ಕಾರವು ಬಾಡಿಗೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿಗಳನ್ನು ತರಲು ನಿರ್ಧರಿಸಿದ್ದು, ಬಾಡಿಗೆ ವಿವಾದಗಳನ್ನು ಇನ್ನು ಮುಂದೆ ಅಪರಾಧವಲ್ಲ ಎಂದು ಪರಿಗಣಿಸಲಾಗುತ್ತದೆ. ಆದರೆ, ದಂಡದ ಮೊತ್ತವನ್ನು ಹತ್ತರಿಂದ ಇಪ್ಪತ್ತು ಪಟ್ಟು ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಈ ತಿದ್ದುಪಡಿಗಳನ್ನು ಮಂಡಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಹೊಸ ಬದಲಾವಣೆಗಳಲ್ಲಿ ಮನೆ ಮಾಲೀಕರು ಮಾತ್ರವಲ್ಲದೆ ಬಾಡಿಗೆದಾರರು ಸಹ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ. ಕೇಂದ್ರ ಸರ್ಕಾರದ ಜನ ವಿಶ್ವಾಸ್ ಕಾಯ್ದೆ 2025ಕ್ಕೆ ಅನುಗುಣವಾಗಿ ಈ ತಿದ್ದುಪಡಿಗಳು ತರಲಾಗುತ್ತಿವೆ. ಜೊತೆಗೆ, ಬಾಡಿಗೆ ಪಡೆದ ಮನೆಗಳನ್ನು ಬಾಡಿಗೆದಾರರು ಮತ್ತೊಬ್ಬರಿಗೆ ಮರುಬಾಡಿಗೆಗೆ ನೀಡುವಂತಿಲ್ಲ ಎಂದು ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.
ಇದೇ ರೀತಿ, ಮನೆ ಮಾಲೀಕರು ಬಾಡಿಗೆದಾರರನ್ನು ಬಲವಂತವಾಗಿ ಹೊರಹಾಕುವಂತಿಲ್ಲ, ಆಸ್ತಿ ವಿವರಗಳನ್ನು ತಪ್ಪಾಗಿ ನೀಡುವಂತಿಲ್ಲ, ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ಗಳು ಅಥವಾ ಮಧ್ಯವರ್ತಿಗಳು ಕಡ್ಡಾಯವಾಗಿ ಬಾಡಿಗೆ ನಿಯಂತ್ರಣ ಕಾಯ್ದೆಯಡಿ ನೋಂದಾಯಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ. ಈ ನಿಯಮಗಳಿಂದ ಮನೆ ಮಾಲೀಕರು ಬೇಕಾಬಿಟ್ಟಿ ಬಾಡಿಗೆ ವಿಧಿಸುವುದು ಹಾಗೂ ಬಾಡಿಗೆ ವಿವಾದಗಳು ಕಡಿಮೆಯಾಗಲಿವೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಯಾರೇ ನಿಯಮ ಉಲ್ಲಂಘನೆ ಮಾಡಿದರೂ ಅವರಿಗೆ ಭಾರೀ ದಂಡ ಅಥವಾ ಜೈಲು ಶಿಕ್ಷೆ ಎದುರಾಗುವ ಸಾಧ್ಯತೆ ಇದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




