ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಹೇಳಿದ್ದ ಬೆನ್ನಲ್ಲೇ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಅವರಿಗೆ ಭಾರೀ ಆಘಾತ ಎದುರಾಗಿದೆ. ಇದೀಗ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಪ್ರಕರಣ ಮತ್ತಷ್ಟು ಗಂಭೀರ ತಿರುವು ಪಡೆದುಕೊಂಡಿದೆ.
ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆಯಲ್ಲಿ, ಸಂತ್ರಸ್ತೆ ಶಿಕ್ಷಕಿ ನೀಡಿದ ದೂರಿನ ಆಧಾರದ ಮೇಲೆ ಸಂದೇಶ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ದೂರಿನ ಪ್ರಕಾರ, 2018ರಿಂದ 2023ರವರೆಗೆ ಶಿಕ್ಷಕಿ ಮನೆಗೆ ತೆರಳಿ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಲಾಗಿದೆ.
2020ರಲ್ಲಿ ಸಂದೇಶ್ ಅವರು ಬೆಳ್ತಂಗಡಿ ಸರ್ಕಲ್ ವ್ಯಾಪ್ತಿಯ ವೇಣೂರು ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ ಅದೇ ಠಾಣಾ ವ್ಯಾಪ್ತಿಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(a)(1), 376(2)(n), 384 ಹಾಗೂ 506ರಡಿ ಪ್ರಕರಣ ದಾಖಲಾಗಿದೆ.
ಇದರ ನಡುವೆ, ಸಂದೇಶ್ ವಿರುದ್ಧ ಇಬ್ಬರು ಮಹಿಳೆಯರು ಮಾಡಿದ್ದ ಲೈಂಗಿಕ ಕಿರುಕುಳ ಆರೋಪಗಳು ಸುಳ್ಳು ಎಂದು ಪೊಲೀಸ್ ವರದಿ ಹೇಳಿತ್ತು. ಮಾಧ್ಯಮಗಳ ಮುಂದೆ ಹಾಜರಾದ ಆ ಮಹಿಳೆಯರು ಪ್ರಚೋದನೆಗೆ ಒಳಗಾಗಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನಿನ್ನೆ ಮಾಹಿತಿ ನೀಡಿದ್ದರು.
ಆದರೆ, ಈ ಹೇಳಿಕೆಯ ಬೆನ್ನಲ್ಲೇ ಇದೀಗ ಅತ್ಯಾಚಾರ ಪ್ರಕರಣ ದಾಖಲಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಸಂತ್ರಸ್ತೆಯ ಆರೋಪಕ್ಕೆ ಸಂಬಂಧಿಸಿದಂತೆ ಕೆಲವು ಆಡಿಯೋ ಹಾಗೂ ವಿಡಿಯೋಗಳು ಹೊರಬಂದ ಹಿನ್ನೆಲೆಯಲ್ಲಿ, ಪ್ರಕರಣದ ತನಿಖೆ ನಡೆಸುವ ಜವಾಬ್ದಾರಿಯನ್ನು ಎಸಿಪಿ ಶ್ರೀಕಾಂತ್ ಅವರಿಗೆ ನೀಡಲಾಗಿತ್ತು.
ಇನ್ನೂ, ಪ್ರಕರಣದ ಬಗ್ಗೆ ಶಾಸಕ ಉಮಾನಾಥ್ ಕೋಟ್ಯಾನ್ ಗೃಹ ಸಚಿವರನ್ನು ಭೇಟಿ ಮಾಡಿ, ಸಂದೇಶ್ ಅವರನ್ನು ಅಮಾನತ್ತಿನಲ್ಲಿಟ್ಟು ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಮಹಿಳಾ ಆಯೋಗವೂ ಸುಮೋಟೋ ಪ್ರಕರಣ ದಾಖಲಿಸಿಕೊಂಡು, ಮಂಗಳೂರು ಪೊಲೀಸ್ ಆಯುಕ್ತರಿಂದ ವರದಿ ಕೇಳಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ, ಇನ್ಸ್‌ಪೆಕ್ಟರ್ ಸಂದೇಶ್ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ವರದಿ : ಲಾವಣ್ಯ ಅನಿಗೋಳ




