ಬೆಂಗಳೂರು ನಮ್ಮ ಮೆಟ್ರೊದ ಗುಲಾಬಿ, ನೀಲಿ ಹಾಗೂ ಹಳದಿ ಮಾರ್ಗಗಳಿಗಾಗಿ ಚಾಲಕರಹಿತ ಎಂಜಿನ್ ಹೊಂದಿರುವ 66 ಮೆಟ್ರೊ ರೈಲುಗಳನ್ನು ಪೂರೈಸಲು ಸಾರ್ವಜನಿಕ ವಲಯದ ಉದ್ಯಮ ಬಿಇಎಂಎಲ್ ಮುಂದಾಗಿದೆ. ಈ ರೈಲುಗಳ ನಿರ್ವಹಣೆಯನ್ನು ಮುಂದಿನ 15 ವರ್ಷಗಳ ಕಾಲ ಬಿಇಎಂಎಲ್ ವಹಿಸಿಕೊಳ್ಳಲಿದೆ.
ಗುಲಾಬಿ ಮಾರ್ಗಕ್ಕೆ ಸೇರಿದ ಮೊದಲ ಮೆಟ್ರೊ ರೈಲು ಕೋಚ್‌ಗಳನ್ನು ಗುರುವಾರ ಹೊಸ ತಿಪ್ಪಸಂದ್ರದಲ್ಲಿರುವ ಬಿಇಎಂಎಲ್ ಕಾರ್ಯಾಗಾರದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಯಿತು. ಬಿಇಎಂಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಾಂತನು ರೇ ಮತ್ತು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ. ರವಿಶಂಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ನಡೆಸಲಾಯಿತು.
ಈ ಹಿಂದೆ ನಮ್ಮ ಮೆಟ್ರೊದ ನೇರಳೆ ಹಾಗೂ ಹಸಿರು ಮಾರ್ಗಗಳಿಗೆ ಒಟ್ಟು 57 ರೈಲುಗಳನ್ನು ಬಿಇಎಂಎಲ್ ಪೂರೈಸಿತ್ತು. ಹಳದಿ ಮಾರ್ಗಕ್ಕೆ 15 ರೈಲುಗಳನ್ನು ಸೇರಿಸಿ ಒಟ್ಟು 36 ರೈಲುಗಳನ್ನು ಪೂರೈಸುವ ಗುತ್ತಿಗೆಯನ್ನು ಚೀನಾದ ಸಿಆರ್‌ಆರ್‌ಸಿ ನಾಂಜಿಂಗ್ ಪುಜೆನ್ ಕಂಪನಿ ಪಡೆದಿತ್ತು. 2023ರಲ್ಲಿ ಬಿಎಂಆರ್‌ಸಿಎಲ್ ಮತ್ತು ಬಿಇಎಂಎಲ್ ನಡುವೆ ₹3,177 ಕೋಟಿ ಮೌಲ್ಯದ ಒಪ್ಪಂದವಾಗಿದ್ದು, ಇದರಡಿ ಗುಲಾಬಿ ಮಾರ್ಗಕ್ಕೆ 16 ಮತ್ತು ನೀಲಿ ಮಾರ್ಗಕ್ಕೆ 37 ಮೆಟ್ರೊ ರೈಲುಗಳನ್ನು ಪೂರೈಸಲಾಗುತ್ತಿದೆ. ಇದಲ್ಲದೆ, ಈ ವರ್ಷ ₹405 ಕೋಟಿ ವೆಚ್ಚದಲ್ಲಿ ಗುಲಾಬಿ ಮಾರ್ಗಕ್ಕೆ 7 ರೈಲುಗಳು ಹಾಗೂ ₹414 ಕೋಟಿ ವೆಚ್ಚದಲ್ಲಿ ಹಳದಿ ಮಾರ್ಗಕ್ಕೆ 6 ರೈಲುಗಳನ್ನು ಪೂರೈಸುವ ಹೊಸ ಒಪ್ಪಂದವೂ ನಡೆದಿದೆ.
ಪ್ರಸ್ತುತ ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಮೆಟ್ರೊ ಸೇವೆ ಕಾರ್ಯಾಚರಣೆಯಲ್ಲಿದೆ. ಗುಲಾಬಿ ಹಾಗೂ ನೀಲಿ ಮಾರ್ಗಗಳು ಶೀಘ್ರ ಸಂಚಾರಕ್ಕೆ ಸಿದ್ಧವಾಗುತ್ತಿವೆ. ಕಿತ್ತಳೆ ಮತ್ತು ಬೆಳ್ಳಿ ಮಾರ್ಗಗಳು ಅನುಮೋದನೆ ಪಡೆದಿದ್ದು, ಕೆಂಪು ಮಾರ್ಗಕ್ಕೆ ಇನ್ನೂ ಅಂತಿಮ ಅನುಮೋದನೆಗಾಗಿ ನಿರೀಕ್ಷೆ ಮುಂದುವರಿದಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ



