ಬಿಗ್ ಬಾಸ್ ಸೀಸನ್ 11 ಇದೀಗ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಹಾಗೆ ನೋಡಿದರೆ ಆರಂಭದಿಂದಲೂ ಒಂದಲ್ಲ ಒಂದು ಸುದ್ದಿಗೆ ಗ್ರಾಸವಾಗಿದ್ದ ಬಿಗ್ ಬಾಸ್ ಮನೆ ಈಗಂತೂ ಸ್ಪರ್ಧಿಗಳ ಮಧ್ಯೆಯೇ ಕಿರಿಕ್ ಶುರುವಾಗಿದೆ. ಅಷ್ಟೇ ಅಲ್ಲ, ಅಲ್ಲಿ ಸ್ನೇಹಕ್ಕೆ ಬೆಲೆಯೂ ಇಲ್ಲವಾಗಿದೆ. ಜೊತೆಗಿದ್ದವರೇ ಒಬ್ಬರಿಗೊಬ್ಬರನ್ನು ತುಳಿಯುತ್ತಿದ್ದಾರೆ. ಎಷ್ಟೇ ಆಗಲಿ, ಅದು ಗೇಮ್. ಅಲ್ಲಿ ಇರೋದೇ ಒಂದು ಕಪ್. ಅದನ್ನು ಗೆಲ್ಲುವ ಸಲುವಾಗಿ, ಯಾರು ಯಾರನ್ನು ಬೇಕಾದರೂ ದೂರಬಹುದು, ಬೈಯಬಹುದು, ಹೀಯಾಳಿಸಬಹುದು, ಅಳಿಸಬಹುದು, ಗೆಳೆತನದ ಸಂಬಂಧವನ್ನೇ ಹಾಳು ಮಾಡಿಕೊಳ್ಳಬಹುದು. ಅಂತೆಯೇ, ಒಂದೇ ತಟ್ಟೆಯಲ್ಲಿ ಊಟ ಮಾಡಿದವರು, ಒಬ್ಬರಿಗೊಬ್ಬರು ಆಪ್ತರಾಗಿದ್ದವರು, ಎಲ್ಲರನ್ನೂ ಮೀರಿಸುವಂತಹ ಗೆಳೆತನ ನಮ್ಮದು ಅಂದುಕೊಂಡವರೆಲ್ಲರೂ ಈಗ ತಮ್ಮ ಗೆಲುವಿನ ಬಗ್ಗೆ ಯೋಚಿಸುತ್ತಿದ್ದಾರೆ. ಸ್ವಾರ್ಥ ಅನ್ನೊದು ಸಹ ಅಲ್ಲಿ ತುಳುಕಾಡುತ್ತಿದೆ. ಒಬ್ಬರೊಬ್ಬರೇ ತಮ್ಮ ಹೊಸ ಮುಖವಾಡ ಕಳಚಿ ಹಾಕುತ್ತಿದ್ದಾರೆ. ಈಗ ಹನುಮಂತನ ಮೇಲೂ ಕೂಡ ಅಲ್ಲಿರುವ ಪ್ರತಿಯೊಬ್ಬ ಸ್ಪರ್ಧಿಗಳು ಮುಗಿಬಿದ್ದಿದ್ದಾರೆ.
ಹೌದು, ಬಿಗ್ ಬಾಸ್ ಮನೆಯಲ್ಲಿ ಈ ವಾರ ರೆಸಾರ್ಟ್ ಟಾಸ್ಕ್ ಆಡಿಸಲಾಗಿದೆ. ಆ ಮನೆಯ ಸ್ಪರ್ಧಿಗಳೆಲ್ಲರೂ ಕಷ್ಟಪಟ್ಟು ಅಂತೂ ಇಂತೂ ಆ ಟಾಸ್ಕ್ ಆಡಿ ಮುಗಿಸಿದ್ದಾರೆ. ಎರಡು ತಂಡಗಳು ಟಾಸ್ಕ್ ಅನ್ನು ಸಾಧ್ಯವಾದಷ್ಟು ಚೆನ್ನಾಗಿಯೇ ಆಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ವಾರದ ಅಂತ್ಯದಲ್ಲಿ ಕಳಪೆ-ಉತ್ತಮ ನೀಡುವ ಸಮಯ ಬಂದಾಗ ಮಾತ್ರ, ಎಲ್ಲರೂ ಒಗ್ಗಟ್ಟಲ್ಲೇ ಮಾತಾಡಿಕೊಂಡೋ ಏನೋ, ಮನೆಯಲ್ಲಿ ತನ್ನಿಷ್ಟದಂತೆ ತನ್ನ ಪಾಡಿಗೆ ತಾನು ಟಾಸ್ಕ್ ಆಡುತ್ತ, ಒಂದಷ್ಟು ಮನರಂಜನೆ ಕೊಡುತ್ತಿರುವ ಹನುಮಂತನ ಆಟಕ್ಕೆ ಕಳಪೆ ನೀಡಿದ್ದಾರೆ.
ರೆಸಾರ್ಟ್ ಟಾಸ್ಕ್ ನಲ್ಲಿ ಹನುಮಂತು ಶುಚಿತ್ವ ಮೇಂಟೇನ್ ಮಾಡಲೇ ಇಲ್ಲ ಎಂದು ಅವನ ತಂಡದಲ್ಲೇ ಇದ್ದ ಸದಸ್ಯರು ಹನುಮಂತನ ಮೇಲೆ ಇನ್ನಿಲ್ಲದ ಆರೋಪ ಮಾಡಿ, ಎಲ್ಲರೂ ಕಳಪೆ ಕೊಟ್ಟಿದ್ದಾರೆ. ಚೈತ್ರಾ ಮೊದಲ ಆರೋಪದಲ್ಲಿ ಕಳಪೆ ಬಗ್ಗೆ ಮಾತಾಡಿದ್ದು ಹೀಗೆ, ಮೇಜರ್ ಇದ್ದಿದ್ದೇ ಶುಚಿತ್ವ. ಅದನ್ನು ಎಲ್ಲೋ ಒಂದು ಕಡೆ ಮೇಂಟೇನ್ ಮಾಡಲಿಲ್ಲ ಅಂದರೆ, ಉಗ್ರಂ ಮಂಜು, ನಿಮ್ಮ ಜೊತೆ ನಮಗೂ ಕಿರಿಕಿರಿ ಆಗ್ತಾ ಇದೆ ಅಂದ್ರು, ಗೆಳೆಯನಂತಿದ್ದ ಪೃಥ್ವಿ ಕೂಡ ಹನುಮಂತು ಅವರು ನನ್ನ ಪ್ರಕಾರ ಕಳಪೆ ಪ್ರದರ್ಶನ ಕೊಟ್ಟಿದ್ದಾರೆ ಅಂದ್ರು. ಗೌತಮಿ ಕೂಡ ಅದೇ ಮಾತಿಗೆ ಜೈ ಅಂದ್ರು. ರಜತ್ ಕೂಡ ಕಳಪೆ ಮಾತಿಗೆ ಧ್ವನಿ ಸೇರಿಸಿದರು. ಆದರೆ, ಹನುಮಂತು ಅವರ ಮೊಗದಲ್ಲಿ ಮಾತ್ರ, ಕಳಪೆ ಅಂದ ಆ ಸ್ಪರ್ಧಿಗಳ ಮಾತಿಗೆ ಕಿವಿಗೊಡದೆ, ಮನಸ್ಸಿಗೆ ನೋವು ಮಾಡಿಕೊಳ್ಳದೆಯೇ ಅವರು ಕೊಟ್ಟ ಕಳಪೆಯನ್ನು ಖುಷಿಯಿಂದಲೇ ಸ್ವೀಕರಿಸಿದರು. ಎಲ್ಲರಿಗೂ ಧನ್ಯವಾದ. ನೀವು ಕಳಪೆ ಕೊಟ್ರಿ ಅಂತ ಕುಗ್ಗೊದೂ ಇಲ್ಲ. ಬಗ್ಗೋದು ಇಲ್ಲ ಅನ್ನುತ್ತಲೇ ಅವರು ಜೈಲು ಸೇರಿದ್ದಾರೆ.
ಇಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ತಮ್ಮ ಪಾಡಿಗೆ ಸೇಫ್ ಗೇಮ್ ಆಡುತ್ತಲೇ, ಎಲ್ಲರ ಕಾಲನ್ನು ಎಳೆಯುತ್ತಲೇ ಇದ್ದ ಹನುಮಂತು, ಈಗ ಬಿಗ್ ಬಾಸ್ ಜೈಲು ಸೇರಿದ್ದಾರೆ. ಅದೇನೆ ಇದ್ದರೂ ಅವರು ನಿಯತ್ತಾಗಿಯೇ ಬಿಗ್ ಬಾಸ್ ಮನೇಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ವ್ಯಕ್ತಿತ್ವದ ಆಟ. ಅದನ್ನು ಅವರು ಸರಿಯಾಗಿಯೇ ಪಾಲಿಸುತ್ತಿದ್ದಾರೆ. ನೇರವಾಗಿ ಮಾತಾಡುವ ಮೂಲಕ ನಿಷ್ಠುರ ಕಟ್ಟಿಕೊಂಡರೂ, ಅದೊಂದು ಗೇಮ್. ಹಾಗಾಗಿ ಅದನ್ನು ಗೇಮ್ ಆಗಿಯೇ ಸ್ವೀಕರಿಸಬೆಕು ಎಂಬ ಸಿದ್ಧಾಂತ ಹೊಂದಿರುವ ಹನುಮಂತು, ಇತ್ತೀಚೆಗೆ ಸ್ಪರ್ಧಿಗಳು ಆಡುತ್ತಿರುವ ಮಾತುಗಳಿಂದ ಕೊಂಚ ನೋವುಂಡಿದ್ದರು. ಹಾಗಾಗಿ, ಈ ಮನೆಯಲ್ಲಿ ಸುಮ್ಮನಿದ್ದರೆ, ಆಗೋದಿಲ್ಲ. ಅಂದುಕೊಂಡಿದ್ದ ಹನುಮಂತು ಸ್ವಲ್ಪ ಸ್ಟ್ರಾಂಗ್ ಆಗಿದ್ದರು. ಮಾತಿನ ಪೆಟ್ಟು ನೀಡುವ ಮೂಲಕವೇ ತಮಗೆ ಅನಿಸಿದ್ದ ಹಾಗೆ ಆಡುತ್ತಿದ್ದರು. ಇತರೆ ಸ್ಪರ್ಧಿಗಳ ಮೇಲೂ ಕೆಲವೊಮ್ಮೆ ರೇಗುತ್ತಿದ್ದರು. ಸೋ, ಇದೀಗ ಅವರನ್ನು ಕಳಪೆ ಅನ್ನುವುದಕ್ಕೂ ಅದೇ ಕಾರಣ ಎನ್ನಲಾಗುತ್ತಿದೆ.
ಅದೇನೆ ಇರಲಿ, ಹನುಮಂತು ಜೈಲು ಸೇರಿದ್ದಾರೆ. ಆದರೂ, ಇನ್ನಷ್ಟು ಆತ್ಮವಿಶ್ವಾಸ ಅವರಲ್ಲಿ ಹೆಚ್ಚಿದೆ. ಜೈಲಿಗೆ ಹೋಗಿಬಂದವರಿಗೆ ಧೈರ್ಯ ಜಾಸ್ತಿ. ಹಾಗಾಗಿ ಹನುಮಂತನಿಗೆ ಆ ಧೈರ್ಯ ಮತ್ತಷ್ಟು ಹೆಚ್ಚಲಿದೆ ಎಂಬ ಮಾತುಗಳು, ಕಾಮೆಂಟ್ ಗಳು ಬರುತ್ತಿವೆ. ಇನ್ನು ಬಿಗ್ ಬಾಸ್ ಆಟ ಬೆರಳೆಣಿಕೆ ದಿನಗಳು ಮಾತ್ರ ಉಳಿದಿದೆ. ಈ ಆಟದಲ್ಲಿ ಯಾರು ಗೆಲ್ಲುತ್ತಾರೋ ಗೊತ್ತಿಲ್ಲ. ಆದರೆ, ಎಲ್ಲರೂ ಕಪ್ ಗೆಲ್ಲಬೇಕು, ತಾನೂ ಬಿಗ್ ಬಾಸ್ ಅಂತ ಕರೆಸಿಕೊಳ್ಳಬೇಕು ಅಂತ ಮಾಸ್ಟರ್ ಪ್ಲಾನ್ ಮಾಡುತ್ತಲೇ ಇದ್ದಾರೆ. ಒಳಗೆ ಇರೋರು ಮೈಂಡ್ ಗೇಮ್ ಮಾಡಿದರೂ, ಹೊರಗೆ ಇರೋರು ಯಾರಿಗೆ ವೋಟ್ ಹಾಕಬೇಕು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಒಂದಂತೂ ನಿಜ, ಈ ಬಿಗ್ ಬಾಸ್ ಮುಗಿಯೋ ಹೊತ್ತಿಗೆ ಒಳಗೆ ಮತ್ತಷ್ಟು ಕಿಡಿ ಹತ್ತೋದಂತೂ ಗ್ಯಾರಂಟಿ.