ಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮದ ಈ ಬಾರಿಯ ಥೀಮ್ Expect the Unexpected ಅಂದರೆ ಅನಿರೀಕ್ಷಿತವನ್ನು ನಿರೀಕ್ಷಿಸಿ! ಪ್ರಾರಂಭದಲ್ಲಿ ಈ ಥೀಮ್ನ್ನು ಕೇವಲ ಸ್ಪರ್ಧಿಗಳು ಮತ್ತು ವೀಕ್ಷಕರಿಗೆ ಅನ್ವಯಿಸುತ್ತದೆ ಎಂದುಕೊಂಡಿದ್ದರು. ಆದರೆ, ಈ ಬಾರಿ ಅದೇ ಥೀಮ್ ನೇರವಾಗಿ ಕಾರ್ಯಕ್ರಮದ ಆಯೋಜಕರಿಗೂ ಅನ್ವಯಿಸಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಶೋ ನಡೆಯುತ್ತಿದ್ದಂತೆಯೇ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕರೆದು ಮನೆಗೆ ಬೀಗ ಹಾಕುವಂತಹ ಘಟನೆ ನಡೆದಿದೆ.
ಬಿಗ್ ಬಾಸ್ ಕನ್ನಡ 11 ಮುಗಿದ ಕೆಲವೇ ಸಮಯದಲ್ಲಿ 12ನೇ ಸೀಸನ್ ಆರಂಭಕ್ಕೂ ಮುನ್ನ ಆಯೋಜಕರು ಹಲವು ಅಡೆತಡೆಗಳನ್ನು ಎದುರಿಸಿದ್ದರು. ಮೊದಲನೇ ಅಡ್ಡಿ ಕಿಚ್ಚ ಸುದೀಪ್ ಅವರ ನಿರ್ಧಾರವಾಗಿತ್ತು. ಶೋ ಹೋಸ್ಟ್ ಮಾಡದಿರಲು ತೀರ್ಮಾನಿಸಿದ್ದರು. ಬಳಿಕ ಹಲವಾರು ಸುತ್ತಿನ ಮಾತುಕತೆಯ ನಂತರ ಅವರು ಒಪ್ಪಿ, ತಮ್ಮ ಸಲಹೆಗಳ ಮೇರೆಗೆ ಅರಮನೆ ಥೀಮ್ನ ಹೊಸ ಮನೆ ನಿರ್ಮಿಸಲಾಯಿತು. ಹಿಂದಿನ ರಾಮೋಹಳ್ಳಿ ಜಾಗದಲ್ಲಿ ಉಂಟಾದ ಪರವಾನಗಿ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು, ತಂಡವು ಈ ಬಾರಿ ಶೂಟಿಂಗ್ ಸ್ಥಳವನ್ನು ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಫಿಲ್ಮ್ ಸಿಟಿಗೆ ಶಿಫ್ಟ್ ಮಾಡಿತ್ತು.
ಆದರೆ ಅನಿರೀಕ್ಷಿತವಾಗಿ ಜಾಲಿವುಡ್ ಸ್ಟುಡಿಯೋದಲ್ಲಿ ದೊಡ್ಡ ಸವಾಲು ಎದುರಾಯಿತು. ಸ್ಟುಡಿಯೋ ಕೊಳಚೆ ನೀರನ್ನು ಸಂಸ್ಕರಿಸದೇ ನೇರವಾಗಿ ಮೋರಿಗೆ ಹರಿಸುತ್ತಿದ್ದ ಕಾರಣ ಜಲಮಾಲಿನ್ಯ ನಿಯಂತ್ರಣ ಕಾಯ್ದೆ ಉಲ್ಲಂಘನೆಯಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಟುಡಿಯೋವನ್ನು ಮುಚ್ಚುವಂತೆ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ನೋಟಿಸ್ ನೀಡಿತು. ಪರಿಣಾಮವಾಗಿ ಜಿಲ್ಲಾಡಳಿತ ಸ್ಟುಡಿಯೋವನ್ನು ಸೀಝ್ ಮಾಡಿದ್ದು, ಅದರ ಬಿಸಿಗಾಳಿಗೆ ಬಿಗ್ ಬಾಸ್ ಮನೆಯೂ ಒಳಪಟ್ಟಿತು. ಅರಮನೆ ಮನೆ ಬಂದ್ ಆಗಿದ್ದು, ಸ್ಪರ್ಧಿಗಳನ್ನು ತಾತ್ಕಾಲಿಕವಾಗಿ ರೆಸಾರ್ಟ್ಗೆ ಕಳುಹಿಸಲಾಗಿದೆ.
ಕಿಚ್ಚ ಸುದೀಪ್ ಪ್ರೋಮೋದಲ್ಲಿ ನಮಗೆ ಎಲ್ಲ ಗೊತ್ತು ಅನ್ನೋರಿಗೆ ಓ ಭ್ರಮೆ! ಎಂದು ಹೇಳಿದ್ದರೂ, ಈ ಬಾರಿ ನಿಜವಾಗಿಯೂ ಯಾರೂ ಊಹಿಸದಂತಹ ಸ್ಥಿತಿ ಬಂದಿದೆ. ಈ ಸೀಸನ್ನಲ್ಲಿ ಎರಡು ಫಿನಾಲೆ ಇರಲಿದೆ, ಇಬ್ಬರು ವಿಜೇತರೂ ಇರಬಹುದು ಎಂದು ಬಿಗ್ ಬಾಸ್ ಘೋಷಿಸಿದ್ದರೂ, ಜಾಲಿವುಡ್ ಸೀಝ್ ಘಟನೆಯು ಶೋಗೆ ಕಡ್ಡಾಯ ಬ್ರೇಕ್ ತಂದಿದೆ. ಇದೀಗ ಆಯೋಜಕರು ಸ್ವತಃ ಸೆಕೆಂಡ್ ಇನ್ನಿಂಗ್ಸ್ ಕಲ್ಪನೆಯತ್ತ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ ಅವರಿಗೂ ನಿಜವಾದ Expect the Unexpected ಅನುಭವವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ