ಬೀಡಿ ಮೇಲಿನ ಜಿಎಸ್‌ಟಿ ದರವನ್ನು ಶೇಕಡ 28ರಿಂದ 18ಕ್ಕೆ ಇಳಿಸಿದ್ದನ್ನು ಟೀಕಿಸುವ ಭರದಲ್ಲಿ, ಕಾಂಗ್ರೆಸ್ ಎಡವಟ್ಟು ಮಾಡಿಕೊಂಡಿದೆ. ಕೇರಳ ಕಾಂಗ್ರೆಸ್ ಘಟಕದ ಟ್ವೀಟ್, ಪಕ್ಷವನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ವಿವಾದ ಭುಗಿಲೇಳುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸಿದೆ.
ಬಿಹಾರ ಮತ್ತು ಬೀಡಿ ಎರಡೂ ಬಿ ಇಂದ ಶುರುವಾಗುತ್ತದೆ. ಇನ್ನು ಮುಂದೆ ಇವೆರಡೂ ಪಾಪಗಳಲ್ಲ ಎಂದು, ಕೇರಳ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿತ್ತು. ಈ ಮೊದಲು ಶೇಕಡ 28ರಷ್ಟು ತೆರಿಗೆಗೆ ಒಳಪಡುತ್ತಿದ್ದ ಸಿಗರೇಟ್, ತಂಬಾಕಿನಂಥ ಪಾಪದ ವಸ್ತುಗಳನ್ನು, ಶೇಕಡ 40ರ ತೆರಿಗೆ ಸ್ತರಕ್ಕೆ ಏರಿಸಲಾಗಿದೆ. ಆದರೆ ಬೀಡಿಯನ್ನು ಮಾತ್ರ 28ರಿಂದ 18ರ ಸ್ತರಕ್ಕೆ ಇಳಿಸಲಾಗಿದೆ. ಬಿಹಾರದಲ್ಲಿ ಬೀಡಿ ಬಳಕೆ ವ್ಯಾಪಕ ಆಗಿರುವ ಕಾರಣ, ಮುಂಬರುವ ಬಿಹಾರ ಚುನಾವಣೆಯಲ್ಲಿ, ಮತದಾರರ ಓಲೈಸಲು ಹೀಗೆ ಮಾಡಲಾಗಿದೆ ಎಂಬುದು ಟ್ವೀಟ್‌ನ ಉದ್ದೇಶವಾಗಿತ್ತು.
ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಕಾಂಗ್ರೆಸ್ಸಿಗರು ಮೊದಲು ಪ್ರಧಾನಿ ಮೋದಿಯವರ ತಾಯಿಯನ್ನು ಅವಮಾನಿಸಿದರು. ಈಗ ಇಡೀ ರಾಜ್ಯವನ್ನೇ ಅಪಮಾನಿಸುತ್ತಿದ್ದಾರೆ. ಇದೇ ಕಾಂಗ್ರೆಸ್‌ನ ನಿಜಬಣ್ಣವಾಗಿದ್ದು, ದೇಶದೆದುರು ಮತ್ತೆ ಮತ್ತೆ ಬಹಿರಂಗವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಹೀಗೆ ಮಾಡುವ ಮೂಲಕ ಕಾಂಗ್ರೆಸ್ ತನ್ನ ಮಿತಿಯನ್ನು ಮೀರುತ್ತಿದೆ ಅಂತಾ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಕಿಡಿಕಾರಿದ್ದು, ಆರ್‌ಜೆಡಿಯ ತೇಜಸ್ವಿ ಯಾದವ್ ಕಾಂಗ್ರೆಸ್ ಹೇಳಿಕೆಯನ್ನು ಬೆಂಬಲಿಸುವರೇ? ಎಂದು ಪ್ರಶ್ನಿಸಿದ್ದಾರೆ. ಜೆಡಿಯು ನಾಯಕ ಸಂಜಯ್ ಕುಮಾರ್ ಝಾ ಕೂಡ ವ್ಯಂಗ್ಯವಾಡಿದ್ದು, ‘ಬಿ ಇಂದ ಬುದ್ಧಿ, ಬಜೆಟ್ ಕೂಡ ಬರುತ್ತದೆ. ಆದರೆ ಬಿಹಾರಕ್ಕೆ ವಿಶೇಷ ಸೌಲಭ್ಯ ಲಭಿಸಿದಾಗೆಲ್ಲಾ ಕಾಂಗ್ರೆಸ್‌ಗೆ ಕಿರಿಕಿರಿಯಾಗುತ್ತದೆ’ ಎಂದು ಟಾಂಗ್ ಕೊಟ್ಟಿದ್ದಾರೆ.
ಎನ್‌ಡಿಎ ಮೈತ್ರಿಕೂಟದ ವಾಗ್ದಾಳಿ ಬೆನ್ನಲ್ಲೇ ತನ್ನ ಪೋಸ್ಟ್ ತೆಗೆದುಹಾಕಿದ ಕೇರಳ ಕಾಂಗ್ರೆಸ್, ‘ಜಿಎಸ್‌ಟಿ ಬಳಸಿಕೊಂಡು ಮೋದಿ ಮಾಡಿದ ಗಿಮಿಕ್ ಟೀಕಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ನಮ್ಮ ಟ್ವೀಟ್ ಅನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ಇದರಿಂದ ಬೇಸರವಾಗಿದ್ದರೆ ಕ್ಷಮೆಯಿರಲಿ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದೆ.

