ಬೆಂಗಳೂರು : ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗ ಬಿಹಾರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ವಿಧಾನಸಭಾ ಚುನಾವಣೆಗೂ ಮುನ್ನವೇ ರಾಜ್ಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಸಿದೆ. ಈಗಾಗಲೇ ಮೊದಲ ಹಂತದ ಪರಿಷ್ಕರಣಾ ಕಾರ್ಯ ಮುಕ್ತಾಯಗೊಂಡಿದ್ದು, 65.2 ಲಕ್ಷ ಮತದಾರರು ಅನರ್ಹ ಎಂದು ಪತ್ತೆ ಹಚ್ಚಲಾಗಿದೆ. ಈ ಎಲ್ಲ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ.
ಇನ್ನೂ ನೂತನವಾಗಿ ಮತದಾರರ ಅರ್ಜಿ ಸಲ್ಲಿಕೆಗೆ ಕಳೆದ ಶುಕ್ರವಾರ ಕಡೆಯ ದಿನವಾಗಿತ್ತು. ಹೀಗಾಗಿ ಈ ಪ್ರಕ್ರಿಯೆಯ ಬಳಿಕ ಚುನಾವಣಾ ಆಯೋಗವು ಅಂಕಿ ಆಂಶಗಳನ್ನು ಬಹಿರಂಗಪಡಿಸಿದೆ. ಆಯೋಗದ ಅಂಕಿ- ಸಂಖ್ಯೆಯ ಪ್ರಕಾರ 22 ಲಕ್ಷ ಜನರು ಮೃತಪಟ್ಟಿದ್ದಾರೆ, 35 ಜನರು ಬಿಹಾರದಿಂದ ಶಾಶ್ವತವಾಗಿ ಹೊರ ರಾಜ್ಯಗಳಲ್ಲಿ ನೆಲೆಸಿದ್ದಾರೆ ಎಂದು ಮಾಹಿತಿ ನೀಡಿದೆ.
ಅಲ್ಲದೆ 7 ಲಕ್ಷ ಜನರು ಒಂದಕ್ಕಿಂತ ಹೆಚ್ಚು ಬಾರಿ ನೋಂದಣಿಯಾಗಿದ್ದರು ಎಂಬ ಅಚ್ಚರಿಯ ಅಂಶವನ್ನು ಆಯೋಗ ಬಯಲಿದೆ ತಂದಿದೆ. ಇನ್ನೂ 1.2 ಲಕ್ಷ ಜನರು ಫಾರಂಗಳನ್ನೇ ವಾಪಸ್ ನೀಡಿಲ್ಲ. ಆದರೆ 65.2 ಲಕ್ಷ ಮತದಾರರು ಅನರ್ಹರು ಎಂದು ಗುರುತಿಸಲಾಗಿದೆ.
ಇಡೀ ಬಿಹಾರದಲ್ಲಿ ಶೇಕಡಾ 99.8ರಷ್ಟು ಜನರು ಪರಿಶೀಲನೆಗೆ ಒಳಪಟ್ಟಿದ್ದಾರೆ. ಅಲ್ಲದೆ ಇನ್ನೂ ಮತದಾರರ ಪಟ್ಟಿಯಿಂದ ದೂರ ಉಳಿದವರು, ಸೇರ್ಪಡೆಯಾಗದವರು 2ನೇ ಹಂತದ ಪರಿಷ್ಕರಣೆಯ ವೇಳೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಚುನಾವನಾ ಆಯೋಗ ಹೇಳಿದೆ.
ಈ ಮತದಾರರ ಪಟ್ಟಿಯ ಪರಿಷ್ಕರಣೆಯು ಬಿಹಾರದಲ್ಲಿ ರಾಜಕೀಯ ನಾಯಕರ ಕೆಸರೆರಚಾಟಕ್ಕೂ ಕಾರಣವಾಗಿದೆ. ಆಡಳಿತಾರೂಢ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಆರ್‌ಜೆಡಿ ಕಿಡಿಕಾರುತ್ತಿದೆ. ಕೇಂದ್ರದ ಮೇಲೆ ಹಾಗೂ ನಿತೀಶ್ ನಾಯಕತ್ವದ ಮೇಲೆ ನಮಗೆ ನಂಬಿಕೆಯಿಲ್ಲ ಎಂದು ಟೀಕಿಸಿದೆ. ಈ ನಡುವೆಯೇ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಚುನಾವಣೆ ಬಹಿಷ್ಕಾರದ ಮಾತುಗಳನ್ನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಹಾರ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.